ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ಭೂಕಂಪಕ್ಕೆ ನಲುಗಿದ್ದ ಟರ್ಕಿಗೆ ಆಪರೇಷನ್ ದೋಸ್ತ್ ಮೂಲಕ ಭಾರತ ಸಾಕಷ್ಟು ನೆರವು ನೀಡಿತ್ತು. ಹಗಲು ರಾತ್ರಿ ಎನ್ನದೆ ಅಲ್ಲಿನ ಕಷ್ಟಕ್ಕೆ ಭಾರತ ಸ್ಪಂದಿಸಿತ್ತು. ಆದರೆ ಟರ್ಕಿ ಭಾರತಕ್ಕೆ ಮಿತ್ರದ್ರೋಹ ಮಾಡಿದೆ.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಮಾಹಿತಿ ಇದ್ದರೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಕಾಶ್ಮೀರ ವಿಷಯವನ್ನು ಟರ್ಕಿ ಪ್ರಸ್ತಾಪಿಸಿದೆ. ಅಷ್ಟೇ ಅಲ್ಲದೆ, ಭಾರತವನ್ನು ಬೆಂಬಲಿಸದೆ ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ.
ಜಿನೆವಾದ ಭಾರತದ ಶಾಶ್ವತ ಮಿಷನ್ ಪ್ರಥಮ ಕಾರ್ಯದರ್ಶಿಯಾಗಿರುವ ಸೀಮಾ ಪೂಜಾನಿ ತಕ್ಕ ಎದುರೇಟು ನೀಡಿದ್ದು, ಜಮ್ಮು ಕಾಶ್ಮೀರದ ಬಗ್ಗೆ ಅನಗತ್ಯ ಹೇಳಿಕೆಗಳನ್ನು ಕೊಡಬೇಡಿ, ನಮ್ಮ ಆಂತರಿಕ ವಿಷಯಕ್ಕೆ ಮೂಗು ತೂರಿಸಬೇಡಿ ಎಂದಿದ್ದಾರೆ. ಸಂಕಷ್ಟದಲ್ಲಿದ್ದಾಗ ಭಾರತವನ್ನು ದೋಸ್ತ್ ಎಂದು ಕರೆದಿದ್ದ ಟರ್ಕಿ ಇದೀಗ ಭಾರತದ ವಿರುದ್ಧವೇ ಮಾತನಾಡುತ್ತಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಪರಿಹಾರವಾಗಿ ಕೊಡಲು ಏನೂ ಇಲ್ಲದೆ, ತನ್ನ ದೇಶದಲ್ಲಿ ಪ್ರವಾಹವಾದಾಗ ಟರ್ಕಿ ಕಳಿಸಿದ್ದ ನೆರವನ್ನೇ ಪಾಕಿಸ್ತಾನ ಮತ್ತೆ ಟರ್ಕಿಗೆ ವಾಪಾಸ್ ಕಳಿಸಿದೆ. ಈ ರೀತಿ ಇದ್ದಾಗಲೂ ಪಾಕ್‌ಗೆ ಟರ್ಕಿ ಬೆಂಬಲ ನೀಡಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ.