ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ದೇಶ ರಾಜಕಾರಣದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದು , ಯಾರು ಊಹಿಸದಂತೆ ಅಚ್ಚರಿಯಾಗಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ಗೆದ್ದು ಸಂಭ್ರಮಿಸಿದೆ. ಈ ಮೂಲಕ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದ್ರಾವಿಡ ಪಕ್ಷಗಳ ಅಧಿಪತ್ಯಕ್ಕೆ ಅಂತ್ಯ ಹಾಡಿದೆ.
ಅದರಲ್ಲೂ ಮೊದಲ ಬಾರಿಗೆ ಯಾವ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವ ಮೂಲಕ 108 ಸ್ಥಾನಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ತಮಗೆ ಎರಡು ವಾರಗಳ ಕಾಲಾವಕಾಶ ನೀಡಬೇಕೆಂದು ಕೋರಿದ್ದಾರೆ.
ಇದರ ನಡುವೆ ಅಭೂತಪೂರ್ವ ಗೆಲುವು ಸಾಧಿಸಿದ ನಟ ವಿಜಯ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಹಿತ ಗಣ್ಯರು ಶುಭಾಶಯ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ವಿಜಯ್ ಅವರು ಕೂಡ ಈ ಇಬ್ಬರೂ ನಾಯಕರಿಗೂ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ತಿಳಿಸಿದ್ದಾರೆ. ಪ್ರಧಾನಿ ಮೋದಿಯವರ ಶುಭಾಶಯಕ್ಕೆ ಅಭಿನಂದನೆ ತಿಳಿಸಿದ ವಿಜಯ್, ಜನರ ಹಿತವೇ ನಮ್ಮ ಗುರಿ. ರಾಜಕೀಯವನ್ನು ಮೀರಿ ರಾಜ್ಯದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರಿಗೂ ಅಭಿನಂದನೆ ಸಲ್ಲಿಸಿದ್ದು, ಉತ್ತಮ ಆಡಳಿತಕ್ಕೆ ಸಹಕಾರದ ಅಗತ್ಯ. ನಮ್ಮ ರಾಜ್ಯದ ಸಾಂಸ್ಕೃತಿಕ ನೀತಿಯನ್ನು ಸಂರಕ್ಷಿಸಲು ನಾವು ಬದ್ಧರಾಗಿರುತ್ತೇವೆ. ರಾಜಕೀಯವನ್ನು ಮೀರಿ, ತಮಿಳುನಾಡಿನ ಜನರ ಕಲ್ಯಾಣಕ್ಕೆ ಆದ್ಯತೆ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.



