ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯ ಹೊರಗಡೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಹೆಣ್ಣುಮಗುವನ್ನು ಅಪರಿಚಿತ ಮಹಿಳೆ ಅಪಹರಿಸಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ನವ್ಯ ಅಪಹರಣಕ್ಕೊಳಗಾದ ಮಗು. ಮಲ್ಲೇಶ್ವರ ಪೈಪ್‌ಲೈನ್ ರಸ್ತೆಯಲ್ಲಿ ಮಗುವಿನ ಪೋಷಕರು ವಾಸಿಸುತ್ತಿದ್ದಾರೆ. ತಾಯಿ ದಿವ್ಯಭಾರತಿ ತಮ್ಮ ಮೊದಲ ಮಗುವನ್ನು ಶಾಲೆಗೆ ಕಳುಹಿಸಲು ತಯಾರಿ ನಡೆಸುತ್ತಿದ್ದರು. ಎರಡನೇ ಮಗು ನವ್ಯ, ಮನೆಯಿಂದ ಹೊರಬಂದು ಆಟವಾಡುತ್ತಿತ್ತು. ಈ ವೇಳೆ ಅಪರಿಚಿತ ಮಹಿಳೆ ಮಾತನಾಡಿಸುವ ನೆಪದಲ್ಲಿ ಬಂದು ಮಗುವನ್ನು ಕರೆದುಕೊಂಡು ಹೋಗಿದ್ದಾಳೆ.
ಕೆಲ ಸಮಯದ ಬಳಿಕ ಹೊರಬಂದು ನೋಡಿದಾಗ ಮಗು ಕಾಣಿಸದಿರುವುದು ಗೊತ್ತಾಗಿದೆ. ಮನೆ ಸುತ್ತಮುತ್ತ ಹುಡುಕಾಟ ನಡೆಸಿದರೂ ಕಾಣದೇ ಇದ್ದಾಗ ಆತಂಕಗೊಂಡ ಪೋಷಕರು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಮಗುವನ್ನು ಅಪರಿಚಿತ ಮಹಿಳೆ ಕರೆದೊಯ್ದಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.