ಹೊಸದಿಗಂತ ವರದಿ ಕಾಸರಗೋಡು:
ಮುಳ್ಳೇರಿಯ ಸಮೀಪದ ಅಡೂರಿನ ದೇವರಡ್ಕ ಎಂಬಲ್ಲಿ ಇಬ್ಬರು ಪುಟ್ಟ ಮಕ್ಕಳು ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಅಡೂರು ದೇವರಡ್ಕದ ಶಾಫಿ – ರುಬೀನ ದಂಪತಿಯ ಪುತ್ರ ಮಹಮ್ಮದ್ ಆಶಿಖ್ (4) ಮತ್ತು ಹಸೈನಾರ್ – ಸೌದ ದಂಪತಿಯ ಪುತ್ರ ಮಹಮ್ಮದ್ ಫಾಸಿಲ್ (3) ಮೃತಪಟ್ಟ ದುರ್ದೈವಿಗಳು.
ಮಂಗಳವಾರ ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದ್ದು ಇಡೀ ಗ್ರಾಮವೇ ಗರಬಡಿದಂತಾಗಿದೆ. ಸಾವನ್ನಪ್ಪಿದ ಪುಟಾಣಿಗಳು ವಿದೇಶದಲ್ಲಿ ಉದ್ಯೋಗಿಯಾಗಿರುವ ಶಾಫಿ ಹಾಗೂ ಅವರ ಸಹೋದರಿ ಸೌದ ಅವರ ಮಕ್ಕಳಾಗಿದ್ದಾರೆ. ಅವರ ಮನೆ ದೇವರಡ್ಕದಲ್ಲಿದ್ದು ಬೆಳಗ್ಗೆ ಮನೆ ಆಸುಪಾಸಿನಲ್ಲಿ ಆಟವಾಡಿಕೊಂಡಿದ್ದ ಮಕ್ಜಳು ಮಧ್ಯಾಹ್ನ ಊಟದ ವೇಳೆಯ ವರೆಗೂ ಕಾಣದಿರುವಾಗ ಪಕ್ಕದ ಹೊಳೆಯ ಕಡೆ ತೆರಳಿರುವುದನ್ನು ಸಂಶಯಿಸಿ ಹುಡುಕಾಡಿದಾಗ ಇಬ್ಬರನ್ನು ಅಸ್ವಸ್ಥ ಸ್ಣಿತಿಯಲ್ಲಿ ಪತ್ತೆ ಹಚ್ಚಲಾಗಿತ್ತು.
ತಕ್ಷಣ ಮುಳ್ಳೇರಿಯ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಲಿಲ್ಲ. ಮೃತಪಟ್ಟ ಇಬ್ಬರು ಪುಟಾಣಿಗಳ ತಂದೆಯಂದಿರೂ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.