ಭಾರತ-ಚೀನಾ ಗಡಿಯಲ್ಲಿ ನಾಪತ್ತೆಯಾದ ಇಬ್ಬರು ವ್ಯಕ್ತಿಗಳು: 2ತಿಂಗಳಾದರೂ ಸಿಗದ ಸುಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ-ಚೀನಾ ಗಡಿಯಲ್ಲಿ ಆಗಸ್ಟ್ 24 ರಂದು ನಾಪತ್ತೆಯಾಗಿದ್ದ ಇಬ್ಬರು ಯುವಕರು ಇನ್ನೂ ಪತ್ತೆಯಾಗಿಲ್ಲ. ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ 33 ವರ್ಷದ ಬಟೇಲುಮ್ ಟಿಕ್ರೊ ಮತ್ತು 35 ವರ್ಷ ವಯಸ್ಸಿನ ಬೇಯಿಂಗ್ಸೊ ಮನ್ಯು ಎಂದು ಗುರುತಿಸಲಾದ ಇಬ್ಬರು ಪುರುಷರು ಆಗಸ್ಟ್ 19 ರಂದು ಔಷಧೀಯ ಸಸ್ಯಗಳನ್ನು ಹುಡುಕಲು ಪರ್ವತಗಳಿಗೆ ಹೋಗುವುದಾಇ ಮನೆಯಿಂದ ಹೊರಟರು. ಃಾಗೆ ಹೋದ ಅವರು ಆಗಸ್ಟ್ 24 ರಂದು ಕೊನೆಯದಾಗಿ ಗ್ರಾಮದ ಕೆಲವರ ಕಣ್ಣಿಗೆ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ.

ಹಾಸಿಗೆ ಮತ್ತು 15-20 ದಿನಗಳವರೆಗೆ ಇರಬಹುದಾದ ಆಹಾರ ಪದಾರ್ಥಗಳನ್ನು ತಮ್ಮೊಂದಿಗೆ ಕೊಂಡೊಯ್ದರು. ಒಂದೂವರೆ ತಿಂಗಳಿಗೂ ಹೆಚ್ಚು ಸಮಯ ಕಳೆದರೂ ಇಬ್ಬರು ವಾಪಸ್ ಬಾರದ ಕಾರಣ ಕುಟುಂಬಸ್ಥರು ಅಕ್ಟೋಬರ್ 9ರಂದು ಖುಪಾ ಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನಾಪತ್ತೆಯಾದವರು ದಾರಿ ತಪ್ಪಿ ಭಾರತದ ಗಡಿ ದಾಟಿ ಚೀನಾವನ್ನು ಪ್ರವೇಶಿಸಿರಬಹುದು ಎಂದು ಶಂಕಿಸಿದ್ದಾರೆ. ಅಲ್ಲಿ ಅವರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅಪಹರಿಸಿರಬಹುದು ಎನ್ನಲಾಗಿದೆ.

ಪಿಎಲ್‌ಎ ಯಿಂದ 2020 ರ ಸೆಪ್ಟೆಂಬರ್‌ನಲ್ಲಿ ಅರುಣಾಚಲ ಪ್ರದೇಶದ ಮೇಲ್ ಸುಬಾನ್ಸಿರಿ ಜಿಲ್ಲೆಯಿಂದ ಐದು ಯುವಕರನ್ನು ಅಪಹರಿಸಿ  ಕೆಲವು ವಾರಗಳ ಬಳಿಕ ಬಿಡುಗಡೆ ಮಾಡಿದ್ದರು. ಈ ವರ್ಷ ಜನವರಿ18 ರಂದು ಸಹ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಿಂದ ಮಿರಾಮ್ ತಾರೋಮ್ ಎಂಬ ಬಾಲಕನನ್ನು ಪಿಎಲ್‌ಎ ಅಪಹರಿಸಿತ್ತು. ಅಧಿಕೃತ ಕಾರ್ಯವಿಧಾನದ ನಂತರ ಅವರನ್ನು ಪಿಎಲ್‌ಎ ಬಿಡುಗಡೆ ಮಾಡಿತು.

ಇದೀಗ ನಾಪತ್ತೆಯಾಗಿರುವ ವ್ಯಕ್ತಿಗಳ ಕುಟುಂಬಸ್ಥರು ಅವರನ್ನು ಪತ್ತೆ ಮಾಡುವಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಗೆ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!