ಹೊಸದಿಗಂತ ವರದಿ ಬೆಳಗಾವಿ:
ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಇಬ್ಬರು ಹದಿಹರೆಯದ ಯುವಕ-ಯುವತಿಗೆ ಮೆದುಳು ನಿಷ್ಕ್ರಿಯಗೊಂಡ ಮತ್ತಿಬ್ಬರ ಹೃದಯಗಳು ಮರುಜೀವ ಕೊಟ್ಟ ಅಪರೂಪದ ಪ್ರಸಂಗ ನಡೆದಿದೆ.
ಧಾರವಾಡದ ಎಸ್‌ಡಿಎಂ ಆಸ್ಪತ್ರೆ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ರೋಗಿಗಳ ಮೆದಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆ ಅವರ ಕುಟುಂಬದವರು ಆ ರೋಗಿಗಳ ಹೃದಯಗಳನ್ನು ದಾನ ಮಾಡಿದ್ದರು. ಹೀಗಾಗಿ ಧಾರವಾಡದಿಂದ ಝಿರೋ ಟ್ರಾಫಿಕ್ ನಲ್ಲಿ ಬೆಳಗಾವಿವರೆಗೆ ತಂದು ಜಮಖಂಡಿ ತಾಲೂಕಿನ ಯುವಕ ಮತ್ತು ಹುಕ್ಕೇರಿ ತಾಲೂಕಿನ ಯುವತಿಗೆ ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರಚಿಕಿತ್ಸಾ ವಿಭಾಗವು ಕಸಿ ಮಾಡುವಲ್ಲಿ ಯಶಸ್ವಿಯಾಗಿದೆ.
ಮೂಡುಬಿದಿರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಜಮಖಂಡಿಯ 18 ವರ್ಷದ ಯುವಕ ಹಾಗೂ ಹುಕ್ಕೇರಿ ಮೂಲದ 25 ವರ್ಷದ ವಿಜ್ಞಾನ ಪಧವೀಧರೆಯಾಗಿರುವ ಯುವತಿಗೆ ಯಶಸ್ವಿ ಹೃದಯದ ಕಸಿ ಮಾಡಲಾಗಿದೆ.
ಇಂಟೆನ್ಸ್‌ವಿಸ್ಟ್, ಕಸಿ ಸಂಯೋಜಕರು, ರಾಜ್ಯ ಅಂಗ ಅಂಗಾಂಶ ಮತ್ತು ಕಸಿ ಸಂಸ್ಥೆಯ ತಂಡಗಳು ಸಮನ್ವಯ ಸಾಧಿಸಿ ದಾನಿಗಳಿಂದ ಅಂಗಾಂಗಳನ್ನು ದಾನ ಪಡೆದು, ಪೊಲೀಸರು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿಯ ಸಕಾರಾತ್ಮಕ ಸೇವೆಯ ಪರಿಣಾಮ ಧಾರವಾಡದಿಂದ ಬೆಳಗಾವಿ ಕೆಎಲ್.ಇ ಆಸ್ಪತ್ರೆಗೆ ಕೇವಲ 55 ನಿಮಿಷಗಳ ದಾಖಲೆಯ ಸಮಯದಲ್ಲಿ ಹೃದಯವನ್ನು ಸ್ಥಳಾಂತರಿಸಿದ್ದು ವಿಶೇಷವಾಗಿತ್ತು.
ಕೆಎಲ್‌ಇ ಸಂಸ್ಥೆಯ ಕರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿ, , ತಮ್ಮ ಮಕ್ಕಳಿಗೆ ಹೃದಯ ಕಸಿ ಮಾಡುವ ದಿಟ್ಟ ನಿರ್ಧಾರ ಕೈಗೊಂಡ ಕುಟುಂಬಸ್ಥರನ್ನು ಅಭಿನಂದಿಸಿದರಲ್ಲದೇ, ಅಂಗಾಂಗಗಳನ್ನು ದಾನ ಮಾಡಿದ ಕುಟುಂಬದ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಆಸ್ಪತ್ರೆಯ ಮುಖ್ಯ ಕಸಿ ಶಸ್ತ್ರ ಚಿಕಿತ್ಸಾ ತಜ್ಞವೈದ್ಯರಾದ ಡಾ. ರಿಚರ್ಡ್ ಸಲ್ಡಾನ್ಹಾ ಅವರು ಮಾತನಾಡಿ, ಹೃದಯ ಕಸಿ ಅತ್ಯಂತ ಸಂಕೀರ್ಣ ಮತ್ತು ಸವಾಲಿನ ಕಾರ್ಯ. ಶಸ್ತ್ರಚಿಕಿತ್ಸಕರು, ಅರೆವಳಿಕೆ ತಜ್ಞರು, ಪರಫ್ಯೂಸನಿಸ್ಟ್, ದಾದಿಯರು ಮತ್ತು ತಂತ್ರಜ್ಞರನ್ನು ಒಳಗೊಂಡಿರುವ ತಂಡದ ಪ್ರಯತ್ನ ಮುಖ್ಯವಾಗಿದೆ ಎಂದು ವಿವರಿಸಿದರು.