ಹೊಸದಿಗಂತ ವರದಿ ಮಡಿಕೇರಿ:
ದ್ವಿಚಕ್ರ ವಾಹನ ಡಿಕ್ಕಿಯಾಗಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಮಡಿಕೇರಿ ಸಮೀಪ ಮೇಕೇರಿಯಲ್ಲಿ ನಡೆದಿದೆ.
ಅಸ್ಸಾಂ ಮೂಲದ ಅಸ್ಮಾ ಕುತುಮ್ ಹಾಗೂ ಇದ್ರಿಸ್ ಅಲಿ ದಂಪತಿಯ ಪುತ್ರಿ ಇಳಿಜಾ ಕುತುಮ್ (5) ಮೃತ ದುರ್ದೈವಿ.
ಮೃತ ಮಗುವಿನ ಪೋಷಕರು ಮೇಕೇರಿ ಗ್ರಾಮದ ತೋಟವೊಂದರ ಲೈನ್ ಮನೆಯಲ್ಲಿ ಕಳೆದ ಮೂರು ತಿಂಗಳಿನಿಂದ ವಾಸವಿದ್ದರೆನ್ನಲಾಗಿದೆ.
ಮಂಗಳವಾರ ಮಗು ರಸ್ತೆ ಬದಿ ಆಟವಾಡುತ್ತಿದ್ದ ಸಂದರ್ಭ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ಬೈಕ್ ಸವಾರ ಮೂರ್ನಾಡು ಗ್ರಾಮದವನಾಗಿದ್ದು, ಈತನಿಗೂ ಗಾಯಗಳಾಗಿವೆ.
ಬಾಲಕಿಯ ಮೃತದೇಹ ಇಟ್ಟಿರುವ ಜಿಲ್ಲಾಸ್ಪತ್ರೆಯ ಶವಾಗಾರದ ಎದುರು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.
ಜಿಲ್ಲಾಸ್ಪತ್ರೆಗೆ ಪೊಲೀಸ್ ಉಪ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಮಾಹಿತಿ ಪಡೆದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.