ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಹತ್ಯೆಗೆ ಪೊಲೀಸ್ ಭದ್ರತೆ ವಾಪಸ್ ಪಡೆದಿರುವುದು ಕಾರಣವಾಯಿತೇ?
ಹೀಗೊಂದು ಸಂಶಯ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಕುಟುಂಬ ಸದಸ್ಯರೂ ಆರೋಪ ಮಾಡಿದ್ದು, ಜೂನ್ 16 ರಂದು ಬೆದರಿಕೆ ದೂರಿನ ನಂತರ ಪೊಲೀಸರು ಕನ್ಹಯ್ಯಾ ಲಾಲ್ಗೆ ರಕ್ಷಣೆ ನೀಡಿದ್ದರು. ಆದರೆ ಮೂರು ದಿನಗಳಲ್ಲಿ ಅದನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
ನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ನೀಡಿ ಕನ್ಹಯ್ಯಾ ಫೇಸ್ಬುಕ್ ಪೋಸ್ಟ್ ಬರೆದಿದ್ದರು. ಈ ಬಗ್ಗೆ ನೆರೆಯ ಅಂಗಡಿಯ ನಾಜಿಮ್ ಧನ್ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿಗೆ ಸಂಬಂಧಿಸಿ ಕನ್ಹಯ್ಯಾ ಲಾಲ್ ಅವರನ್ನು ಅದೇ ದಿನ ಬಂಧಿಸಿ ಮರುದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಅದಾದ ಬಳಿಕ ಕನ್ಹಯ್ಯಾ ಲಾಲ್ ಅಂಗಡಿಯಲ್ಲಿ 3 ದಿನಗಳ ಕಾಲ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು. ಬಳಿಕ ಈ ಭದ್ರತೆಯನ್ನು ಪಾಪಸ್ ಪಡೆಯಲಾಗಿತ್ತು.
ಸತತ ಬೆದರಿಕೆ ಕರೆ
ಈ ಬಗ್ಗೆ ಸ್ಪೋಟಕ ಮಾಹಿತಿ ನೀಡಿರುವ ಕನ್ಹಯ್ಯಾ ಲಾಲ್ ಪುತ್ರ ಯಶ್, ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಿಗೇ ಪದೇ ಪದೇ ಅಂಗಡಿಯನ್ನು ಮುಚ್ಚಲು ಬೆದರಿಕೆ ಕರೆ ಬರುತ್ತಿದ್ದವು. ಇದರಿಂದ ಹೆದರಿ ಕನ್ಹಯ್ಯಾ ಜೂ.15 ರಂದು ಸ್ಥಳೀಯ ಉದ್ಯಮಿಗಳೊಂದಿಗೆ ಧನ್ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭದ್ರತೆಯನ್ನು ಹೆಚ್ಚಿಸುವಂತೆ ನನ್ನ ತಂದೆ ಮನವಿ ಮಾಡಿದಾಗ, ಭದ್ರತಾ ಸಿಬ್ಬಂದಿಯನ್ನು ಅನಿರ್ದಿಷ್ಟವಾಗಿ ಬಿಡಲು ಸಾಧ್ಯವಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದರು. ಭದ್ರತೆ ನೀಡುವ ಬದಲು, ಅಂಗಡಿ ಮುಚ್ಚುವಂತೆ ಅವರು ನಮಗೆ ಹೇಳಿದ್ದರು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ