ಉದಯಪುರದ ಟೈಲರ್ ಕನ್ಹಯ್ಯ ಹಂತಕರಿಗೆ ಪಾಕಿಗಳಿಬ್ಬರ ನೆರವು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಉದಯಪುರದ ಟೈಲರ್ ಶಿರಚ್ಛೇದ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಬ್ಬರು ಪಾಕಿಸ್ತಾನ ಪ್ರಜೆ ಸೇರಿ 11 ಜನರ ವಿರುದ್ಧ ಜೈಪುರದಲ್ಲಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.

ಟೈಲರ್ ಕನ್ಹಯ್ಯ ಲಾಲ್‌ರನ್ನು ಜೂನ್ 28 ರಂದು ಅಂಗಡಿಯಲ್ಲೇ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಹತ್ಯೆ ಯೋಜನೆ ರೂಪಿಸಿದ್ದಲ್ಲದೆ, ಪ್ರಮುಖ ಆರೋಪಿಗಳನ್ನು ತೀವ್ರಗಾಮಿಯನ್ನಾಗಿಸಲು ಆಡಿಯೊ ಮತ್ತು ವಿಡಿಯೊಗಳನ್ನು ಒದಗಿಸಿದ್ದರು.

ಎನ್‌ಐಎ ಮೂಲಗಳ ಪ್ರಕಾರ, ಪ್ರಮುಖ ಆರೋಪಿ ಗಳು ಕರಾಚಿ ಮೂಲದ ಸಲ್ಮಾನ್ ಮತ್ತು ಅಬು ಇಬ್ರಾಹಿಂ ಜತೆ ಸಂಪರ್ಕದಲ್ಲಿದ್ದರು. ಇವರಿಬ್ಬರಲ್ಲೂ ಶಿರಚ್ಛೇದ ಮಾಡಿದ ವಿಡಿಯೊ ಮಾಡುವಂತೆ ಈ ವ್ಯಕ್ತಿಗಳು ಹೇಳಿದ್ದು, ಈ ಮೂಲಕ ಜಗತ್ತಿಗೆ ಸಂದೇಶ ಕಳುಹಿಸಬೇಕು ಎಂದಿದ್ದರು.

ಏಳು ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ಒಂದು ವಾರ ಕಾಲ ಪ್ರವಾಸ ಹೋಗಿದ್ದ ಮೊಹಮ್ಮದ್ ಗೌಸ್ ಅಲ್ಲಿ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್‌ನನ್ನು ಭೇಟಿ ಮಾಡಿದ್ದು, ಅಲ್ಲಿ ಇಬ್ಬರೂ ಸಂಪರ್ಕ ಸಂಖ್ಯೆ ಹಂಚಿಕೊಂಡಿದ್ದರು. ಇದಾದ ನಂತರ ಸಲ್ಮಾನ್ ವಿವಿಧ ಪ್ಲಾಟ್ ಫಾರಂಗಳಲ್ಲಿ ಗುಂಪು ರಚಿಸಿ ಅಲ್ಲಿ ಇಬ್ರಾಹಿಂ ಮತ್ತು ಮೊಹಮ್ಮದ್ ರಿಯಾಜ್ ಅತ್ತಾರಿ ಮೊದಲಾದವರನ್ನು ಗುಂಪಿಗೆ ಸೇರಿಸಿದ್ದ ಎಂದು ಮೂಲಗಳು ಹೇಳಿವೆ.

ಪ್ರವಾದಿ ಬಗ್ಗೆ ಹೇಳಿಕೆಯನ್ನು ಬೆಂಬಲಿಸಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದ ಕನ್ಹಯ್ಯ ಲಾಲ್‌ನನ್ನು ಶಿಕ್ಷಿಸುವಂತೆ ಸಲ್ಮಾನ್ ಮತ್ತು ಇಬ್ರಾಹಿಂ ಪ್ರಮುಖ ಆರೋಪಿಗೆ ಒತ್ತಾಯಿಸಿದ್ದರು. ಕನ್ಹಯ್ಯ ಲಾಲ್‌ನ ಪೋಸ್ಟ್ ಅನ್ನು ವಿವಿಧ ಗುಂಪುಗಳಿಗೆ ಪೋಸ್ಟ್ ಮಾಡಿ ಆತನ ಹತ್ಯೆ ಮಾಡುವ ಸಂಚು ರೂಪಿಸಲಾಗಿತ್ತು.

ಎನ್‌ಐಎ ಪ್ರಧಾನ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಕರಾಚಿ ಮೂಲದ ಇಬ್ಬರು ಆರೋಪಿಗಳು ಅವರನ್ನು ತೀವ್ರಗಾಮಿಗಳನ್ನಾಗಿಸಿದ್ದಾರೆ ಮತ್ತು ದೋಷಾರೋಪಣೆಯ ಆಡಿಯೊಗಳು, ವಿಡಿಯೋಗಳು ಮತ್ತು ಸಂದೇಶಗಳನ್ನು ಗುಂಪುಗಳಲ್ಲಿ ಕಳುಹಿಸಿದ್ದಾರೆ ಎಂಬುದು ಪತ್ತೆಯಾಗಿದೆ. ಗುಂಪುಗಳಿಂದ ತೆಗೆದುಕೊಳ್ಳಲಾದ ಅವರ ಮೊಬೈಲ್ ಸಂಖ್ಯೆಗಳನ್ನು ಹೊರತುಪಡಿಸಿ ಪಾಕಿಸ್ತಾನಿ ಆರೋಪಿಗಳ ಯಾವುದೇ ಪರಿಶೀಲಿಸಿದ ವಿವರಗಳನ್ನು ಎನ್‌ಐಎ ಹೊಂದಿಲ್ಲ.

ಚಾಕುಗಳು, ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಜೋಡಿಸಿ ಕನ್ಹಯ್ಯ ಲಾಲ್ ಫೇಸ್‌ಬುಕ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಹಗಲು ಹೊತ್ತಿನಲ್ಲೇ ಅವರ ಹತ್ಯೆ ಮಾಡಲಾಗಿದೆ. ಇದಾದ ನಂತರ ಹತ್ಯೆಯ ವಿಡಿಯೊ ಚಿತ್ರೀಕರಿಸಿ ಅದನ್ನು ವೈರಲ್ ಮಾಡಲಾಗಿದೆ ಎಂದು ಎನ್‌ಐಎ ಹೇಳಿದೆ.

ಇತರ ಆರೋಪಿಗಳ ಪಾತ್ರವೇನು?
ಇನ್ನೋರ್ವ ಆರೋಪಿ ಮೊಹಮ್ಮದ್ ಜಾವೇದ್ ತನ್ನ ಅಂಗಡಿಯಲ್ಲಿ ಕನ್ಹಯ್ಯ ಲಾಲ್ ಇರುವ ಬಗ್ಗೆ ಮಾಹಿತಿಯನ್ನು ಮುಖ್ಯ ಹಂತಕ ಮತ್ತು ಆರೋಪಿ ರಿಯಾಜ್ ಅಟ್ಟಾರಿಗೆ ರವಾನಿಸುವ ಜವಾಬ್ದಾರಿಯನ್ನು ಹೊಂದಿದ್ದ. ಅದೇ ರೀತಿ, ಫರ್ಹಾದ್ ಮೊಹಮ್ಮದ್ ಶೇಖ್ ರಿಯಾಜ್ ಒಬ್ಬನ ಆಪ್ತ ಸಹಾಯಕ ಮತ್ತು ಪಿತೂರಿಯ ಸಕ್ರಿಯ ಭಾಗವಾಗಿದ್ದ ಎಂದು ಎನ್‌ಐಎ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!