ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಯುಡಿಎಫ್ ಮೈತ್ರಿಕೂಟ ಇಂದು ದೇವರ ನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ನೂತನ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿರುವ ಕಾಂಗ್ರೆಸ್ ನಾಯಕ ವಿ.ಡಿ ಸತೀಶನ್ ಮತ್ತು ಅವರ 20 ಮಂದಿ ಸಹೋದ್ಯೋಗಿಗಳು ಇಂದು ಭವ್ಯ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಅಧಿಕೃತವಾಗಿ ಸಚಿವರ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಸರ್ಕಾರ ರಚನೆಗೆ ರಾಜಭವನ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಕೇರಳ ರಾಜಕೀಯ ಇತಿಹಾಸದಲ್ಲೇ ಹೊಸ ದಾಖಲೆಯೊಂದು ನಿರ್ಮಾಣವಾಗುತ್ತಿದೆ.
60 ವರ್ಷಗಳ ಇತಿಹಾಸದಲ್ಲೇ ಹೊಸ ದಾಖಲೆ!
ಸಾಮಾನ್ಯವಾಗಿ ಹಂತ ಹಂತವಾಗಿ ಸಚಿವರ ಪ್ರಮಾಣ ವಚನ ನಡೆಯುವುದು ವಾಡಿಕೆ. ಆದರೆ, ಕಳೆದ 6 ದಶಕಗಳಲ್ಲೇ ಮೊದಲ ಬಾರಿಗೆ ಇಡೀ ಯುಡಿಎಫ್ ಸಚಿವ ಸಂಪುಟದ ಎಲ್ಲಾ 21 ಸದಸ್ಯರು ಏಕಕಾಲದಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವುದು ವಿಶೇಷ. ಭಾನುವಾರವೇ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರು ತಮ್ಮ ಮೈತ್ರಿಕೂಟದ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದರು.
ಸಂಪುಟದಲ್ಲಿ ಹೊಸ ಮುಖಗಳು
ಈ ಬಾರಿಯ ಕೇರಳ ಸಚಿವ ಸಂಪುಟದಲ್ಲಿ ಯುವಕರಿಗೆ ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟು 21 ಸಚಿವರ ಪೈಕಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಸೇರಿದಂತೆ 14 ಮಂದಿ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಸಂಪುಟದಲ್ಲಿ ಇಬ್ಬರು ಮಹಿಳಾ ಶಾಸಕಿಯರಿಗೆ ಸ್ಥಾನ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಸಮುದಾಯದ ಇಬ್ಬರು ಸದಸ್ಯರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲಾಗಿದೆ.
ಕರ್ನಾಟಕದಿಂದ ಡಿಕೆಶಿ ಆಗಮನ
ಕೇರಳದ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಷ್ಟ್ರೀಯ ನಾಯಕರು ತಿರುವನಂತಪುರಕ್ಕೆ ಆಗಮಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಇಂದು ಕೇರಳಕ್ಕೆ ಭೇಟಿ ನೀಡಿದ್ದು, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಯುಡಿಎಫ್ ಭರ್ಜರಿ ಗೆಲುವಿನ ಬಳಿಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮತ್ತಷ್ಟು ಬಲಗೊಂಡಂತಾಗಿದೆ.



