ಹೊಸದಿಗಂತ, ಮಂಗಳೂರು:
ಉಡುಪಿ ಜಿಲ್ಲೆಯ ಪ್ರಸಿದ್ಧ ದೈವ ನರ್ತಕ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಧು ಪಾಣಾರ ಮಂಚಿಕೆರೆ ವಿಧಿವಶರಾಗಿದ್ದಾರೆ.
ಅಲ್ಪಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರಿಗೆ 68 ವರ್ಷ ವಯಸ್ಸಾಗಿತ್ತು. ಉಡುಪಿ ಜಿಲ್ಲೆ ಅಲೆವೂರು ಗ್ರಾಮದವರಾದ ಪಾಣಾರ, ದೈವ ನರ್ತಕರಾಗಿ ಪ್ರಸಿದ್ಧಿ ಪಡೆದಿದ್ದರು. ಉಡುಪಿ ಜಿಲ್ಲೆಯಲ್ಲದೆ ಹೊರ ಜಿಲ್ಲೆಗಳಲ್ಲಿಯೂ ಅವರು ಜುಮಾದಿ, ವ್ಯಾಘ್ರ ಚಾಮುಂಡಿ, ಕಲ್ಲುಕುಟ್ಟಿಗ, ಪಂಜುರ್ಲಿ, ಬಗ್ಗು ಪಂಜುರ್ಲಿ, ಬೊಬ್ಬರ್ಯ, ಮಲೆಧೂಮಾವತಿ ದೈವಗಳ ಸೇವೆ ಸಲ್ಲಿಸಿದ್ದಾರೆ.
ದೈವಾರಾಧನೆ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ವಿವಿಧ ಸಂಘ ಸಂಘಟನೆಗಳು ಅವರನ್ನು ಗೌರವಿಸಿವೆ. ಪಾಣಾರ ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರ ಸಹಿತ ಬಂಧುಬಳಗ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.