ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನಲ್ಲಿ ನಡೆದ ನಕ್ಸಲ್ ವಿಕ್ರಂ ಗೌಡ ಹತ್ಯೆ ಬೆನ್ನಲ್ಲೇ ಇನ್ನಷ್ಟು ಮಾಹಿತಿ ಹೊರಬೀಳುತ್ತಿದೆ.
ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಮಲೆನಾಡು ಹಾಗೂ ಕರಾವಳಿಯ ಅರಣ್ಯ ಭಾಗದಲ್ಲಿ ವಾಸಿಸುತ್ತಿರುವ ಜನರ ಬೆಂಬಲ ಪಡೆದುಕೊಳ್ಳುವ ನಿಟ್ಟಿನಲ್ಲಿ ನಕ್ಸಲ್ ವಿಕ್ರಂ ಗೌಡ ನೇತೃತ್ವದ ನಕ್ಸಲರ ತಂಡ ಈ ಭಾಗಗಳಲ್ಲಿ ಮತ್ತೆ ತಿರುಗಾಟ ಪ್ರಾರಂಭ ಮಾಡಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಅರಣ್ಯ ಭೂಮಿಗಳ ಗಡಿಭಾಗದಲ್ಲಿದ್ದ ಜನರನ್ನ ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಕೇಳುವ ನಿಟ್ಟಿನಲ್ಲಿ ಈ ಕಾರ್ಯಪ್ರವೃತ್ತವಾಗಿತ್ತು ಎನ್ನಲಾಗಿದೆ.
ಈ ನಡುವೆ ಭಾನುವಾರ ದಿನ ಆಹಾರ ಸಂಗ್ರಹಣೆಗಾಗಿ ಹೆಬ್ರಿ ಭಾಗದ ಕಬ್ಬಿನಾಲೆ ಪರಿಸರಕ್ಕೆ ವಿಕ್ರಂ ಗೌಡ ನೇತೃತ್ವದ ತಂಡ ಬಂದಿರುವ ಮಾಹಿತಿ ಪಡೆದ ಎಎನ್‌ಎಫ್ ಕಾರ್ಕಳ, ಹೆಬ್ರಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಕೂಂಬಿಂಗ್ ತೀವ್ರಗೊಳಿಸಿತ್ತು.ಈ ವೇಳೆ ವಿಕ್ರಂ ಗೌಡ ಮುಖಾಮುಖಿಯಾಗಿದ್ದಾನೆ. ಎಎನ್‌ಎಫ್ ಹಾಗೂ ಈತನ ನಡುವೆ ಗುಂಡಿನ ಕಾಳಗ ನಡೆದಿದ್ದು, ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ನೆಲಕ್ಕುರುಳಿದ್ದಾನೆ.
ಸೋಮವಾರ ಬೆಳಿಗ್ಗೆ ಘಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಉಳಿದ ನಕ್ಸಲರು ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ.