September 30, 2026
Wednesday, September 30, 2026
spot_img

ಉಕ್ರೇನ್ ಸಂಘರ್ಷದ ಬಿಸಿ: ಒಡೆಸಾ ಬಂದರಿನಲ್ಲಿ ಭಾರತೀಯರಿದ್ದ ಹಡಗಿನ ಮೇಲೆ ಕ್ಷಿಪಣಿ ದಾಳಿ, ಇಬ್ಬರು ನಾಪತ್ತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉಕ್ರೇನ್‌ನ ಪ್ರಮುಖ ಬಂದರು ನಗರಿಯಾದ ಒಡೆಸಾದಲ್ಲಿ ನಾಲ್ವರು ಭಾರತೀಯ ಪ್ರಜೆಗಳಿದ್ದ ವಾಣಿಜ್ಯ ಹಡಗಿನ ಮೇಲೆ ಭೀಕರ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿರುವುದು ದೃಢಪಟ್ಟಿದ್ದು, ಉಳಿದ ಇಬ್ಬರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.

ಶನಿವಾರ ನಡೆದಿದ್ದ ಕ್ಷಿಪಣಿ ಘಾತ

ರಷ್ಯಾ-ಉಕ್ರೇನ್ ಸಂಘರ್ಷದ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಕಪ್ಪು ಸಮುದ್ರದ ಒಡೆಸಾ ಬಂದರಿನಲ್ಲಿ ಲಂಗರು ಹಾಕಿದ್ದ ‘ಎಂವಿ ಎಜಿಎನ್ ರಾಗ್ನರ್’ (MV AGN Ragnar) ಹಡಗಿನ ಮೇಲೆ ಶನಿವಾರ (ಜುಲೈ 25) ಈ ದಾಳಿ ನಡೆದಿದೆ. 2022 ರಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದಾಗಿನಿಂದಲೂ ಒಡೆಸಾ ಬಂದರು ನಿರಂತರವಾಗಿ ದಾಳಿಗೆ ತುತ್ತಾಗುತ್ತಲೇ ಇದೆ.

ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿರುವ ಭಾರತೀಯ ರಾಯಭಾರ ಕಚೇರಿ

ಈ ಆತಂಕಕಾರಿ ಘಟನೆಯ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ರಾಯಭಾರ ಕಚೇರಿ, “ಜುಲೈ 25 ರಂದು ಒಡೆಸಾ ಬಂದರಿನಲ್ಲಿ ಎಂವಿ ಎಜಿಎನ್ ರಾಗ್ನರ್ ಹಡಗಿನ ಮೇಲೆ ನಡೆದ ದಾಳಿಯ ನಂತರದ ಪರಿಸ್ಥಿತಿಯನ್ನು ಭಾರತೀಯ ರಾಯಭಾರ ಕಚೇರಿ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ” ಎಂದು ತಿಳಿಸಿದೆ. ದಾಳಿಯ ಸಮಯದಲ್ಲಿ ಹಡಗಿನಲ್ಲಿ ನಾಲ್ವರು ಭಾರತೀಯ ಪ್ರಜೆಗಳಿದ್ದರು ಎಂಬುದನ್ನು ಕಚೇರಿ ಖಚಿತಪಡಿಸಿದೆ.

ಇಬ್ಬರು ಸೇಫ್; ಉಳಿದವರಿಗಾಗಿ ಮುಂದುವರಿದ ಶೋಧ

“ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಇಬ್ಬರು ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ದೃಢಪಟ್ಟಿದೆ. ಆದರೆ ಇನ್ನುಳಿದ ಇಬ್ಬರು ಭಾರತೀಯ ಪ್ರಜೆಗಳ ಬಗ್ಗೆ ಮಾಹಿತಿ ಇನ್ನು ಲಭ್ಯವಾಗಬೇಕಿದೆ” ಎಂದು ರಾಯಭಾರ ಕಚೇರಿ ಹೇಳಿದೆ. ಸದ್ಯ ನಾಪತ್ತೆಯಾಗಿರುವ ಸಿಬ್ಬಂದಿಯ ಪ್ರಸ್ತುತ ಸ್ಥಿತಿಯನ್ನು ಪತ್ತೆಹಚ್ಚಲು ಮತ್ತು ಅವರಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲು ಸ್ಥಳೀಯ ಅಧಿಕಾರಿಗಳೊಂದಿಗೆ ರಾಯಭಾರ ಕಚೇರಿ ನಿರಂತರ ಸಂಪರ್ಕದಲ್ಲಿದೆ ಹಾಗೂ ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ.

ಇದನ್ನೂ ಓದಿ:

ದಾಳಿಯ ಮೂಲ ಅಸ್ಪಷ್ಟ

ಈ ಹಡಗಿನ ಮೇಲೆ ದಾಳಿ ನಡೆಸಿದ್ದು ಯಾರು, ದಾಳಿ ನಡೆದ ಸಂದರ್ಭದ ಪರಿಸ್ಥಿತಿ ಏನಾಗಿತ್ತು ಅಥವಾ ಒಟ್ಟು ಎಷ್ಟು ಜನ ಸಿಬ್ಬಂದಿ ಹಡಗಿನಲ್ಲಿದ್ದರು ಎಂಬ ಪ್ರಾಥಮಿಕ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇದರೊಂದಿಗೆ ಆ ನಾಲ್ವರು ಭಾರತೀಯರ ಗುರುತು ಮತ್ತು ಹಡಗಿನಲ್ಲಿ ಅವರ ಪಾತ್ರ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಫೆಬ್ರವರಿ 2022 ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ಒಡೆಸಾ ಬಂದರು ನಿರಂತರವಾಗಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಗುರಿಯಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಭಾರತವು ಈಗಾಗಲೇ ತನ್ನ ಪ್ರಜೆಗಳಿಗೆ ಉಕ್ರೇನ್‌ಗೆ ಪ್ರಯಾಣಿಸದಂತೆ ಹಲವು ಬಾರಿ ಎಚ್ಚರಿಕೆ ನೀಡಿದೆ.

Must Read