ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಬಂದರಿನ ಮೇಲೆ ರಷ್ಯಾ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ ಕಾಸರಗೋಡಿನ ನಿವಾಸಿ ಅಚಲ್ ಜೋಯೆಲ್ ಘಟನೆ ನಡೆದ ದಿನವೂ ಎಂದಿನಂತೆ ಮನೆಯವರಿಗೆ ಕರೆ ಮಾಡಿ ಮಾತನಾಡಿದ್ದರು.
‘ಎಲ್ಲವೂ ಚೆನ್ನಾಗಿದೆ’ ಎಂದು ತಂದೆ-ತಾಯಿಗೆ ಧೈರ್ಯ ತುಂಬಿದ್ದ ಮಗನ ಧ್ವನಿ ಕೇಳಿ ಕುಟುಂಬವೂ ನೆಮ್ಮದಿಯಾಗಿತ್ತು. ಆದರೆ ಆ ನೆಮ್ಮದಿ ಕೆಲವೇ ಗಂಟೆಗಳಷ್ಟೇ ಉಳಿಯಿತು. ಮಧ್ಯಾಹ್ನದ ವೇಳೆಗೆ ಉಕ್ರೇನ್ ಸಮುದ್ರ ತೀರದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಅಚಲ್ ಮೃತಪಟ್ಟಿರುವ ಸುದ್ದಿ ತಲುಪುತ್ತಿದ್ದಂತೆ ಮನೆಮಂದಿ ಶೋಕಸಾಗರದಲ್ಲಿ ಮುಳುಗಿದರು.
ಮಗನ ಸಾವಿನ ಸುದ್ದಿ ಕೇಳಿದ ತಾಯಿ ಸಾಲಿ ತೀವ್ರ ಆಘಾತದಿಂದ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಮಗನ ಮದುವೆ ನೋಡಬೇಕೆಂಬ ಕನಸು ಕಂಡಿದ್ದ ಕುಟುಂಬಕ್ಕೆ ವಿಧಿಯೇ ಕ್ರೂರ ಆಘಾತ ನೀಡಿದಂತಾಗಿದೆ.
ಚೆನ್ನೈನ ಮೆರೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಮರ್ಚೆಂಟ್ ನೇವಿಗೆ ಸೇರಿದ್ದ ಅಚಲ್, ಕುಟುಂಬದ ಹೆಮ್ಮೆಯಾಗಿದ್ದರು. ಖಾಸಗಿ ಸಂಸ್ಥೆಯಲ್ಲಿ ಸೇಲ್ಸ್‌ಮನ್ ಆಗಿರುವ ತಂದೆ ಮತ್ತು ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ತಾಯಿ ತಮ್ಮ ಮಗನ ಯಶಸ್ಸಿನ ಬಗ್ಗೆ ಸದಾ ಹೆಮ್ಮೆಪಡುತ್ತಿದ್ದರು. ಇದೀಗ ಅದೇ ಮನೆಯೊಳಗೆ ಮದುವೆಯ ಸಿದ್ಧತೆಗಳ ಬದಲು ಅಂತ್ಯಸಂಸ್ಕಾರದ ದುಃಖ ಆವರಿಸಿದೆ.
ಇದನ್ನೂ ಓದಿ;
ಭಾರತದ ತೀವ್ರ ಆಕ್ರೋಶ
ವಾಣಿಜ್ಯ ಹಡಗನ್ನು ಗುರಿಯಾಗಿಸಿ ನಡೆದ ಈ ಕ್ಷಿಪಣಿ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ನಿರಪರಾಧ ನಾಗರಿಕರ ಜೀವಕ್ಕೆ ಅಪಾಯ ಉಂಟುಮಾಡುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಸಮುದ್ರ ವ್ಯಾಪಾರ ಮತ್ತು ಹಡಗು ಸಂಚಾರದ ಸುರಕ್ಷತೆಗೆ ಧಕ್ಕೆ ತರುವ ಇಂತಹ ದಾಳಿಗಳು ಸಂಪೂರ್ಣ ಅಸ್ವೀಕಾರಾರ್ಹ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಿ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಬೇಕೆಂದು ಭಾರತ ಒತ್ತಾಯಿಸಿದೆ.



