ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಶುರುಮಾಡಿ ಇಂದು 13ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶ ಬಿಟ್ಟು ತಲೆಮರೆಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಇಂತಹ ಟೀಕೆಗಳಿಗೆ ಝೆಲೆನ್ಸ್ಕಿ ತೆರೆ ಎಳೆದಿದ್ದಾರೆ.
ನಿನ್ನೆ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡ ಝೆಲೆನ್ಸ್ಕಿ, ನಾನು ಕೀವ್ ನಗರದ ಬಂಕೋವಾ ರಸ್ತೆಯಲ್ಲಿರುವ ನಮ್ಮ ಕಚೇರಿಯಲ್ಲೇ ಇದ್ದೇನೆ. ನಾನೆಲ್ಲೂ ಅಡಗಿ ಕುಳಿತಿಲ್ಲ. ನಮ್ಮ ದೇಶ ಗೆಲ್ಲಲು ಎಷ್ಟು ಸಮಯ ಬೇಕೋ ಅಲ್ಲಿಯವರೆಗೆ ನಾನು ಇಲ್ಲಿಯೇ ಇರುತ್ತೇನೆ ಎಂದಿದ್ದಾರೆ.
ಇದೇ ವೇಳೆ ತಮ್ಮ ಕಚೇರಿಯ ಸುತ್ತಮುತ್ತಲಿನ ದೃಶ್ಯಗಳನ್ನು ತೋರಿಸಿದ್ದಾರೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಮೂರನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ ಎಂದಿದ್ದಾರೆ.
ಫೆ.24ರಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಸೇನೆ ಕಾರ್ಯಾಚರಣೆ ಘೋಷಿಸಿದ್ದು, ಈವರೆಗೆ ನೂರಾರು ನಾಗರಿಕರು, ಸಾವಿರಾರು ಸೈನಿಕರು ಮೃತಪಟ್ಟಿದ್ದಾರೆ