ಉಕ್ರೇನ್ ಮೇಲೆ ಮುರಕೊಂಡು ಬೀಳಲಿದೆಯಾ ರಷ್ಯ? ನಮ್ಮ ಮೇಲೇನು ಪ್ರಭಾವ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉಕ್ರೇನ್ ವಿಚಾರದಲ್ಲಿ ಪಾಶ್ಚಾತ್ಯ ಜಗತ್ತು ಹಾಗೂ ರಷ್ಯ ನಡುವಿನ ಸಂಘರ್ಷ ಈಗ ನಿರ್ಣಾಯಕ ಹಂತ ತಲುಪುವ, ಅಂದರೆ ರಷ್ಯವು ಉಕ್ರೇನಿನ ಕೆಲ ಭಾಗಗಳ ಮೇಲೆ ಮಿಲಿಟರಿ ಬಲ ಪ್ರಯೋಗಿಸಲಿರುವ ಸಾಧ್ಯತೆ ದಟ್ಟವಾಗುತ್ತಿದೆ. ಉಕ್ರೇನ್ ನಲ್ಲಿ ನಡೆಯುತ್ತಿರೋದೇನು, ಇದರಲ್ಲಿ ಭಾರತದ ನಿಲುವೇನು ಹಾಗೂ ಈ ಜಾಗತಿಕ ವಿದ್ಯಮಾನ ನಮ್ಮ ಬದುಕಿನ ಮೇಲೂ ಪ್ರಭಾವ ಬೀರುತ್ತಾ ಎಂಬ ಪ್ರಶ್ನೆಗಳಿಗೆ ಈ ಕೆಳಗಿನ ಚುಟುಕು ಮಾಹಿತಿಗಳು ತುಂಬ ಸಂಕ್ಷಿಪ್ತದಲ್ಲಿ ಎಲ್ಲವನ್ನೂ ಹೇಳುತ್ತವೆ, ಓದಿ.

  1. ಉಕ್ರೇನ್ ಜತೆ ಭಿನ್ನಾಭಿಪ್ರಾಯ ಹೊಂದಿರುವ ಪೂರ್ವದ ಎರಡು ಪ್ರಾಂತ್ಯಗಳನ್ನು ರಷ್ಯವು ಸ್ವತಂತ್ರ ಎಂದು ಗುರುತಿಸುವುದರೊಂದಿಗೆ ಉಕ್ರೇನ್ ಸಾರ್ವಭೌಮತೆಗೆ ಪೆಟ್ಟು ಕೊಟ್ಟಿದೆ. ತನ್ನೆರಡು ಯೋಧರೂ ರಷ್ಯ ಶೆಲ್ ದಾಳಿಗೆ ಮೃತರಾಗಿರುವುದಾಗಿ ಉಕ್ರೇನ್ ಹೇಳಿರುವುದು ಸಂಘರ್ಷ ತಾರಕಕ್ಕೇರಲಿರುವುದನ್ನು ಸೂಚಿಸುತ್ತದೆ.
  2. ಈ ಸಂಘರ್ಷದಲ್ಲಿ ಅಮೆರಿಕ ಪ್ರಣೀತ ಪಾಶ್ಚಾತ್ಯ ಪಡೆಗಳು ಯುದ್ಧಕಣಕ್ಕಿಳಿದು ರಷ್ಯ ವಿರುದ್ಧ ಸೆಣೆಸಾಡುವುದು ಅನುಮಾನ. ಆದರೆ ಈ ಮೊದಲೇ ಸೂಚಿಸಿದಂತೆ ಅನೇಕ ಬಗೆಯ ಆರ್ಥಿಕ ಪ್ರತಿಬಂಧಗಳನ್ನು ರಷ್ಯ ಹಾಗೂ ರಷ್ಯದ ಪ್ರಮುಖ ನಾಯಕರು ಮತ್ತು ಆರ್ಥಿಕ ಹಿತಾಸಕ್ತಿ ಜನರ ಮೇಲೆ ಹೇರುವುದಕ್ಕೆ ಪಾಶ್ಚಾತ್ಯ ದೇಶಗಳು ಪ್ರಕ್ರಿಯೆ ಆರಂಭಿಸಿವೆ. ಇಂಗ್ಲೆಂಡ್ ಅದಾಗಲೇ ರಷ್ಯದ ಐದು ಬ್ಯಾಂಕುಗಳು ಹಾಗೂ ಶ್ರೀಮಂತ ವ್ಯಕ್ತಿಗಳ ಮೇಲೆ ನಿರ್ಬಂಧ ಹೇರಿದೆ.
  3. ಭಾರತ ಈ ವಿಚಾರದಲ್ಲಿ ಉಭಯ ಪಡೆಗಳು ರಾಜತಾಂತ್ರಿಕ ಮಾರ್ಗದಿಂದ ಸಮಸ್ಯೆ ಪರಿಹರಿಸಿಕೊಳ್ಳಲಿ ಎಂದು ಹೇಳಿದೆಯಾದರೂ ರಷ್ಯವನ್ನು ಖಂಡಿಸಿಲ್ಲ. ಭಾರತವು ಈ ವಿಚಾರದಲ್ಲಿ ತಮ್ಮ ಜತೆಗಿರಬೇಕು ಎಂಬುದು ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ಒತ್ತಾಯವಾಗಿತ್ತು. ಆದರೆ, ರಷ್ಯದ ಜತೆ ಸ್ನೇಹದಿಂದ ಇರುವ ಭಾರತ ತನಗೆ ಹಾಗೆ ಯಾವುದೇ ಪಕ್ಷವನ್ನು ವಹಿಸಿಕೊಳ್ಳಬೇಕಾದ ದರ್ದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
  4. ಉಕ್ರೇನ್-ರಷ್ಯ ಹಣಾಹಣಿ ಭಾರತದಲ್ಲಿ ಜನಸಾಮಾನ್ಯರ ಬದುಕನ್ನು ಪ್ರಭಾವಿಸಲಿದೆಯೇ ಎಂಬುದಕ್ಕೆ ಉತ್ತರ- ಹೌದು! ರಷ್ಯವು ಯುರೋಪಿನ ರಾಷ್ಟ್ರಗಳಿಗೆ ಇಂಧನ ಪೂರೈಸುವ ಪ್ರಮುಖ ದೇಶ. ಇದೀಗ ಆರ್ಥಿಕ ದಿಗ್ಬಂಧನಗಳು ಅದರ ತೈಲ ಪೂರೈಕೆಯನ್ನೇ ನಿಯಂತ್ರಿಸಲಿವೆ. ಇದು ರಷ್ಯಕ್ಕೆ ದೊಡ್ಡ ಆರ್ಥಿಕ ನಷ್ಟ ಉಂಟುಮಾಡಿದರೂ ಇತ್ತ ಯುರೋಪಿನ ದೇಶಗಳ ಇಂಧನ ಬೇಡಿಕೆ ಸಹ ಹೊಡೆತ ಕಾಣಲಿದೆ. ಇವೆಲ್ಲದರ ಪರಿಣಾಮವಾಗಿ ಅಂತಾರಾಷ್ಟ್ರೀಯವಾಗಿ ತೈಲಬೆಲೆ ಏರುವುದು ಖಚಿತ ಹಾಗೂ ಅದು ಭಾರತದ ಬದುಕನ್ನೂ ದುಬಾರಿಯಾಗಿಸಲಿರುವುದು ಈ ಕ್ಷಣದ ಅನಿವಾರ್ಯ ಚಿತ್ರಣ.
  5. ಉಕ್ರೇನಿನಲ್ಲಿ ವಿಶೇಷವಾಗಿ ವೈದ್ಯಕೀಯ ರಂಗದಲ್ಲಿರುವವರೂ ಸೇರಿದಂತೆ, 20,000 ಭಾರತೀಯರನ್ನು ಯುದ್ಧಗ್ರಸ್ತ ಪ್ರದೇಶಗಳಿಂದ ರಕ್ಷಿಸಿಕೊಂಡು ಬರುವ ಹೊಸ ಸವಾಲು ಭಾರತಕ್ಕೆ ಎದುರಾಗಿದೆ.
  6. ರಷ್ಯದ ಕೆಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಅಂತಾರಾಷ್ಟ್ರೀಯವಾಗಿ ನಿರ್ಬಂಧ ಹೇರಿದಾಗ ಅವರು ಅಂತಾರಾಷ್ಟ್ರೀಯ ಕರೆನ್ಸಿಗಳಲ್ಲಿ ವ್ಯವಹಾರ ನಡೆಸುವುದು ಅಸಾಧ್ಯವಾಗುತ್ತದೆ. ಭಾರತವು ಇಂಥ ಸಂಸ್ಥೆ-ವ್ಯಕ್ತಿಗಳೊಂದಿಗೆ ವ್ಯವಹಾರ ಹೊಂದಿದ್ದಾಗ, ಸಹಜವಾಗಿಯೇ ಇಲ್ಲಿ ವಹಿವಾಟು ಕಷ್ಟವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!