Monday, August 8, 2022

Latest Posts

ಆರೋಪಿಗಳ ಬಂಧನ, ಹಿಂದು ಸಮಾಜದ ಒಗ್ಗಟ್ಟಿನ ಸ್ಪಂದನ- ಹರ್ಷ ಹತ್ಯೆ ಪ್ರಕರಣದ ಈ ದಿನದ ಎಲ್ಲ ಬೆಳವಣಿಗೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೇ 12ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಾಗುತ್ತಿದೆ. ಇನ್ನೊಂದೆಡೆ ಮುಖಂಡರು ಹರ್ಷ ಕುಟುಂಬಕ್ಕೆ ಸಾಂತ್ವಾನ ಹೇಳುತ್ತಿದ್ದಾರೆ.

ಮೊಹಮ್ಮದ್ ಖಾಸಿಫ್, ಸೈಯದ್ ನದೀಮ್, ಆಸೀಫ್ ಉಲ್ಲಾ ಖಾನ್, ರಿಹಾನ್ ಶರೀಫ್, ನಿಹಾನ್, ಅಬ್ದುಲ್ ಅಫ್ನಾನ್ ಬಂಧಿತ ಆರೋಪಿಗಳಾಗಿದ್ದಾರೆ. ತನಿಖೆ ಮುಂದುವರಿದಿದೆ, ಆರೋಪಿಗಳ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.

ಆರೋಪಿಗಳಾದ ಮೊಹಮ್ಮದ್ ಖಾಸಿಫ್, ಆಸೀಫ್ ಉಲ್ಲಾ ಖಾನ್, ರಿಹಾನ್ ಶರೀಫ್ ಮತ್ತು ನಿಹಾನ್ ಹರ್ಷ ಅವರನ್ನು ಹತ್ಯೆ ಮಾಡಿದ್ದಾರೆ. ಮೊದಲು ಇಬ್ಬರನ್ನು ಬಂಧಿಸಿದ್ದು, ನಂತರ ನಾಲ್ವರ ಬಂಧನ ಮಾಡಲಾಗಿದೆ. ನಗರದಲ್ಲಿನ ಗಲಭೆಗೆ ಸಂಬಂಧಿಸಿ ಈವರೆಗೆ 13 ಎಫ್ಐಆರ್ ದಾಖಲಾಗಿವೆ. ಮೃತದೇಹದ ಅಂತಿಮ ಯಾತ್ರೆಯ ವೇಳೆಯಲ್ಲಿ 18 ವಾಹನಗಳ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಲಾಗಿದೆ. ಗಲಭೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಬಂದೋಬಸ್ತ್‌ಗಾಗಿ 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ
ಹರ್ಷ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿ ಜಾರಿಯಲ್ಲಿರುವ ಸೆಕ್ಷನ್ 144 ಅನ್ನು ಶುಕ್ರವಾರ ಬೆಳಗಿನವರೆಗೆ ವಿಸ್ತರಿಸಲಾಗಿದೆ. ಇನ್ನು 2 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 9ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಮುಂದೆ 144 ಸೆಕ್ಷನ್ ವಿಸ್ತರಿಸುವ ತೀರ್ಮಾನ ಕೈಗೊಳ್ಳುತ್ತೇವೆಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ತಿಳಿಸಿದ್ದಾರೆ.

ರಾಜಕೀಯ ಕೆಸರೆರಚಾಟ
ಈ ಮಧ್ಯೆ ಹರ್ಷ ಹತ್ಯೆ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಎಡೆ ಮಾಡಿಕೊಟ್ಟಿದೆ. ವಿಪಕ್ಷ ಕಾಂಗ್ರೆಸ್ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರೆ, ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ಮೇಲೆ ಆರೋಪಿಸಿದ್ದಾರೆ. ಇನ್ನೊಂದೆಡೆ ಹಿಂದು ಕಾರ್ಯಕರ್ತರು ಕೂಡ ಬಿಜೆಪಿ ಸರಕಾರದ ವಿರುದ್ಧ ತೀವ್ರವಾಗಿ ಮುನಿಸಿಕೊಂಡಿದ್ದಾರೆ. ಪಿಎಫ್ಐ, ಎಸ್‌ಡಿಪಿಐ ವಿರುದ್ಧ ಆರೋಪಿಸುತ್ತಿರುವ ಹಿಂದು ಕಾರ್ಯಕರ್ತರು, ಬಿಜೆಪಿ ಸರಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದುತ್ವಕ್ಕಾಗಿ ಹರ್ಷ ಹತ್ಯೆಯೇ ಅಂತಿಮವಾಗಬೇಕು, ಹಿಂದು ಕಾರ್ಯಕರ್ತರ ರಕ್ಷಣೆ ಸರಕಾರದಿಂದ ನಡೆಯಬೇಕೆಂದು ಒತ್ತಾಯಿಸಿದ್ದಾರೆ.

ಕುಟುಂಬಕ್ಕೆ ಗಣ್ಯರ ಸಾಂತ್ವಾನ
ಶಿವಮೊಗ್ಗದ ಸೀಗೆಹಟ್ಟಿಯಲ್ಲಿರುವ ಹರ್ಷ ಅವರ ಕುಟುಂಬಕ್ಕೆ ಹಿಂದು ಮುಖಂಡರು, ಬಿಜೆಪಿ ನಾಯಕರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಸಚಿವ ನಾರಾಯಣ ಗೌಡ, ಸಂಸದ ತೇಜಸ್ವಿ ಸೂರ್ಯ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಯಶಪಾಲ ಸುವರ್ಣ, ಯುವಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಮೊದಲಾದ ಗಣ್ಯರು ಭೇಟಿ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆ ಮಾಡಿ ಮಾತನಾಡಿದ್ದು, ಕುಟುಂಬದೊಂದಿಗೆ ನಾವಿದ್ದೇವೆ. ಸದ್ಯದಲ್ಲೇ ಮನೆಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಕುಟುಂಬಕ್ಕೆ ನೆರವಿನ ಹಸ್ತ
ಸಾಂತ್ವಾನದ ಜೊತೆಗೆ ಹರ್ಷ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದವರು ಕೂಡ ಹಲವರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಒಟ್ಟು ₹ 6ಲಕ್ಷಗಳನ್ನು ಘೋಷಣೆ ಮಾಡಿದ್ದಾರೆ. ನಟ ಪ್ರಥಮ್ ₹ 25 ಸಾವಿರ ಕೊಡುವುದಾಗಿ ಹೇಳಿದ್ದಾರೆ. ಶಾಸಕರಾದ ವೇದವ್ಯಾಸ ಕಾಮತ್ ₹ 2ಲಕ್ಷ, ಅರವಿಂದ ಲಿಂಬಾವಳಿ ₹ 1ಲಕ್ಷ ಘೋಷಿಸಿದ್ದಾರೆ. ಶಾಸಕ ರಾಜೇಶ್ ನಾಯಕ್ ಮತ್ತು ಯಶಪಾಲ್ ಸುವರ್ಣ, ಮಹೇಶ್ ವಿಕ್ರಮ ಫೌಂಡೇಶನ್‌ನಿಂದ ಮಹೇಶ್ ಹೆಗ್ಡೆ ತಲಾ ₹ 1ಲಕ್ಷ ನೀಡಿದ್ದಾರೆ. ಇನ್ನೂ ಹಲವರು ನೆರವು ತಮ್ಮ ಕೈಲಾದ ಮೊತ್ತವನ್ನು ಹರ್ಷ ಅವರ ತಾಯಿಯ ಖಾತೆಗೆ ಜಮೆ ಮಾಡಿದ್ದಾರೆ.

ವರದಿಗಳ ಪ್ರಕಾರ, ಮಂಗಳವಾರ ಸಂಜೆ ವೇಳೆಗೆ 30 ಲಕ್ಷ ರುಪಾಯಿಗಳಷ್ಟು ಹಣ ಮೃತ ಹರ್ಷರವರ ತಾಯಿಯ ಖಾತೆಗೆ ಹರಿದುಬಂದಿದ್ದು, ಹಿಂದು ಸಮಾಜದ ಸ್ಪಂದನೆಗೆ ಕನ್ನಡಿ ಹಿಡಿದಿದೆ.

ಹರ್ಷ ಹತ್ಯೆಯನ್ನು ಖಂಡಿಸಿ, ಮಂಗಳವಾರ ನಾಡಿನ ವಿವಿಧೆಡೆ ಪ್ರತಿಭಟನೆಗಳು ಜರಗಿವೆ. ಹಿಂದು ಜಾಗರಣ ವೇದಿಕೆ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಸಂಜೆ 5.30ಕ್ಕೆ ಬೆಂಗಳೂರು ಟೌನ್ ಹಾಲ್ ಎದುರಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss