ಉಕ್ರೇನ್ ಕದನ ಕುತೂಹಲ- ಗಡಿಯಲ್ಲಿ ನೂರಕ್ಕೂ ಹೆಚ್ಚು ಮಿಲಿಟರಿ ವಾಹನಗಳನ್ನು ನಿಲ್ಲಿಸಿದೆ ರಷ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಮಾಡಲಿರುವ ಭೀತಿ ನಡುವೆಯೇ ಉಕ್ರೇನ್ ಗಡಿ ಬಳಿಯ ಪ್ರದೇಶದಲ್ಲಿ ರಷ್ಯಾದ ಸೇನೆಯ ಹೊಸ ನಿಯೋಜನೆಯನ್ನು ಉಪಗ್ರಹ ಚಿತ್ರಗಳು ತೋರಿಸಿವೆ.

ಉಕ್ರೇನ್ ಗಡಿಯ ಸಮೀಪ ದಕ್ಷಿಣ ಬೆಲಾರಸ್‌ನಲ್ಲಿ 100 ಕ್ಕೂ ಹೆಚ್ಚು ಮಿಲಿಟರಿ ವಾಹನಗಳು ಮತ್ತು ಡಜನ್‌ಗಟ್ಟಲೆ ಸೈನಿಕ ಟೆಂಟ್‌ಗಳ ಹೊಸ ನಿಯೋಜನೆಯನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಪ್ರತ್ಯೇಕವಾದಿಗಳನ್ನು ಬೆಂಬಲಿಸಲು ದೇಶದ ಹೊರಗೆ ಸೈನ್ಯವನ್ನು ಬಳಸಲು ಅನುಮತಿ ನೀಡಿದ್ದರು. ಕಳೆದ 24 ಗಂಟೆಗಳಲ್ಲಿ ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕವಾದಿಗಳು ನಡೆಸಿದ ಶೆಲ್ ದಾಳಿಯಲ್ಲಿ ಸೈನಿಕನೊಬ್ಬ ಮೃತಪಟ್ಟಿದ್ದಾನೆ ಹಾಗೂ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಇತ್ತೀಚಿನ ವಾರಗಳಲ್ಲಿ ರಷ್ಯಾ ಉಕ್ರೇನ್ ಗಡಿಯ ಬಳಿ 150,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಸೇರಿದಂತೆ ಹಲವು ದೇಶಗಳು ರಷ್ಯಾದ ಮೇಲೆ ನಿರ್ಬಂಧ ಹೇರಿವೆ. ಯುಎಸ್ ತನ್ನ ಸೈನ್ಯವನ್ನು ಪೂರ್ವ ಯುರೋಪಿನ ನ್ಯಾಟೊ ಸದಸ್ಯ ರಾಷ್ಟ್ರಗಳಿಗೆ ಕಳುಹಿಸುತ್ತಿದೆ.

ಈ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದ್ದು, ಸಮಸ್ಯೆಗಳನ್ನು ಬಗೆಹರಿಸಲು ನಿರ್ಬಂಧಗಳನ್ನು ವಿಧಿಸುವುದು ಉತ್ತಮ ಮಾರ್ಗವಲ್ಲ ಎಂದು ಹೇಳಿದೆ. ಈ ನಡುವೆ, ಪಾಶ್ಚಾತ್ಯ ರಾಷ್ಟ್ರ ಇಲ್ಲವೇ ರಷ್ಯಾದಲ್ಲಿ ಒಂದನ್ನು ಆಯ್ದುಕೊಳ್ಳದೇ, ಈ ಬಿಕ್ಕಟ್ಟು ರಾಜತಾಂತ್ರಿಕವಾಗಿ ಬಗೆಹರಿಯಲಿ ಎಂದಷ್ಟೇ ಪ್ರತಿಕ್ರಿಯಿಸಿರುವ ಭಾರತದ ನಿಲುವನ್ನು ರಷ್ಯ ಸ್ವಾಗತಿಸಿದೆಯಲ್ಲದೇ, ಉಭಯ ದೇಶಗಳ ನಡುವಿನ ಕಾರ್ಯಸೂಕ್ಷ್ಮ ಒಪ್ಪಂದಗಳಿಗೆ ಇಂಥ ನಿಲುವು ಪೂರಕವಾಗಿದೆ ಎಂದು ಪ್ರತಿಕ್ರಿಯಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!