ಹೊಸ ದಿಗಂತ ವರದಿ, ಅರಕಲಗೂಡು:
ಕೊಣನೂರು ಹೋಬಳಿ ಕಂಟೇನಹಳ್ಳಿ ಗ್ರಾಮದ ರೈತನೊಬ್ಬ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೆ.ಡಿ.ರವಿ (೫೦) ಮೃತ ರೈತ. ಆತ ವಿವಿಧ ಸಂಘಗಳು, ಮೈಕ್ರೋ ಫೈನಾನ್ಸ್ಗಳಿಂದ ಸುಮಾರು ೯ ಲಕ್ಷ ರೂಪಾಯಿ ಸಾಲ ಮಾಡಿದ್ದರು. ಹಣ ಪಾವತಿಸುವಂತೆ ಸಾಲ ಕೊಟ್ಟವರು ಒತ್ತಡ ಹೇರುತ್ತಿದ್ದುದರಿಂದ ಮನನೊಂದು ಆತ್ಮಹಯತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮೃತ ರೈತ ಧರ್ಮಸ್ಥಳ ಸಂಘದಲ್ಲಿ ೧ ಲಕ್ಷ ರೂ., ಬಿಎಸ್‌ಎಸ್, ಚೈತನ್ಯ ಮೈಕ್ರೋಫೈನಾನ್ಸ್ನಿಂದ ತಲಾ ೬೦ ಸಾವಿರ, ಸಮಸ್ತ ಮೈಕ್ರೋಫೈನಾನ್ಸ್ನಿಂದ ೭೦ ಸಾವಿರ, ಎಲ್&ಟಿ ಮೈಕ್ರೋಫೈನಾನ್ಸ್ನಿಂದ ೬೫ ಸಾವಿರ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿAದ ೧.೫೦ ಲಕ್ಷ ರೂ ಅಲ್ಲದೇ, ಒಂಭತ್ತು ಲಕ್ಷ ಕೈ ಸಾಲ ಮಾಡಿಕೊಂಡಿದ್ದರು.
ಸಾಲ ಮಾಡಿ ಶುಂಠಿ ಬೆಳೆದಿದ್ದರೂ ಬೆಳೆ ಸರಿಯಾಗಿ ಬಾರದೆ, ಬೆಲೆಯೂ ಸಿಗದೆ ಸಾಕಷ್ಟು ನಷ್ಟ ಉಂಟಾಗಿತ್ತು. ಇದರ ಜೊತೆಗೆ ಇಬ್ಬರು ಹೆಣ್ಣುಮಕ್ಕಳ ಮದುವೆಗೂ ಹಣ ಕರ್ಚು ಮಾಡಿದ್ದರು. ಈ ನಡುವೆ ಸಾಲಗಾರರು ಒಟ್ಟೊಟ್ಟಿಗೆ ಕಿರುಕುಳ ನೀಡಲು ಆರಂಭಿಸಿದ್ದರಿಂದ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶಾಸಕ ಎ.ಮಂಜು ಅವರು ಮೃತನ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಮಾತುಕತೆಯಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ಸಾವೇ ಪರಿಹಾರವಲ್ಲ. ಇಂತಹ ಘಟನೆಗಳು ನಡೆಯಬಾರದು. ರೈತಾಪಿ ವರ್ಗದವರು ದೈರ್ಯವಾಗಿ ಇರಬೇಕು. ಮೈಕ್ರೋ ಫೈನಾನ್ಸ್ ಅಥವಾ ಸಾಲ ನೀಡಿದ ವ್ಯಕ್ತಿಗಳು ಹೆಚ್ಚಿನ ಒತ್ತಡ ಕೊಡುವುದು ಸರಿಯಲ್ಲ ಎಂದರು.