ವಿಧಾನಸಭೆಯಲ್ಲಿ ‘ಮೇಕೆದಾಟು ಯೋಜನೆ’ ನಿರ್ಣಯಕ್ಕೆ ಸರ್ವಾನುಮತದ ನಿರ್ಣಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನಿರ್ಣಯ ಖಂಡಿಸಿ ಹಾಗೂ ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ್ ಜೋಡಣೆ ಯೋಜನೆಗೆ ವಿರೋಧಿಸಿ ಸದನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ನಿರ್ಣಯವನ್ನು ಮಂಡನೆ ಮಾಡಿದರು. ಎಲ್ಲಾ ಪಕ್ಷಗಳಿಂದ ಸರ್ವಾನುಮತದ ಧ್ವನಿಮತದ ಅಂಗೀಕಾರ ಕೂಡ ನೀಡಲಾಗಿದೆ.

ಇದೇ ವೇಳೆ ಮೇಕೆದಾಟು ಯೋಜನೆಗೆ ಈ ಕೂಡಲೇ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗ (Central Water Commission) ಹಾಗೂ ಪರಿಸರ ಮತ್ತು ಅರಣ್ಯ ಮಂತ್ರಾಲಯ (MoEF)ಕ್ಕೆ ಒತ್ತಾಯ ಮಾಡಲಾಯಿತು.

ಮೇಕೆದಾಟು ಯೋಜನೆಗಾಗಿ ನಿರ್ಣಯ ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಹಲವು ವಿಚಾರಗಳನ್ನು ತಾವು ಮಂಡಿಸಿದ ನಿರ್ಣಯದಲ್ಲಿ ಸದನಕ್ಕೆ ತಿಳಿಸಿದರು.

1. ಕರ್ನಾಟಕ ರಾಜ್ಯವುಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ವಿರೋಧಿಸಿ, ದಿನಾಂಶ 21 03, 2022 ರಂದು ತಮಿಳುನಾಡು ವಿಧಾನ ಸಭೆಯು ಅಂಗೀಕರಿಸಿದ ಒಕ್ಕೂಟ ವಿರೋಧಿ ಮತ್ತು ಸಮರ್ಥನೀಯವಲ್ಲದ ನಿರ್ಣಯವನ್ನು ಮತ್ತು ತಮಿಳುನಾಡು ರಾಜ್ಯವು ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿ ಏಕಪಕ್ಷೀಯವಾಗಿ ಯೋಜಿಸಿರುವ ಕಾನೂನುಬಾಹಿರ ಯೋಜನೆಗಳನ್ನು ಸಹ ಈ ಸದನವು ಗಣನೆಗೆ ತೆಗೆದುಕೊಂಡಿರುತ್ತದೆ.

2. ಸರ್ವೋಚ್ಚ ನ್ಯಾಯಾಲಯವು ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ತೀರ್ಪನ್ನು ಮಾರ್ಪಡಿಸಿ ಸಾಮಾನ್ಯ ಜಲ ವರ್ಷದಲ್ಲಿ ಬಿಳಿಗುಂಡ್ಲುವಿನಲ್ಲಿ 177.25 30 ನೀರಿನ ಪ್ರಮಾಣವನ್ನು ಖಚಿತಪಡಿಸುವಂತ ನಿಗದಿಪಡಿಸಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಹಂಚಿಕೆ ಮಾಡಿರುವಂತೆ ಬೆಂಗಳೂರು ಮೆಟ್ರೋಪಾಲಿಟನ್ ನಗರದ ಕುಡಿಯುವ ನೀರಿನ ಅಗತ್ಯತೆಗೆ 24 ಟಿಎಂಸಿ (4.75 consumptive use) ನೀರನ್ನು ಸುಸ್ಥಿರಗೊಳಿಸಲು ಹಾಗೂ ತತ್ಪರಿಮಾಣವಾಗಿ ಜಲವಿದ್ಯುತ್ ಉತ್ಪಾದನೆಗೆ ಅಂತರ್-ರಾಜ್ಯ ನದಿ ಕಾವೇರಿಗೆ ಅಡ್ಡಲಾಗಿ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ಯೋಜಿಸಲಾಗಿದೆ. ಸದರಿ ಯಾವುದೇ ಭಾದಕ ಅಥವಾ ಹಾನಿಯಾಗುವುದಿಲ್ಲ. ಯೋಜನೆಯಿಂದ ತಮಿಳುನಾಡು ರಾಜ್ಯಕ್ಕೆ ಯಾವುದೇ ಭಾಧಕ ಅಥವಾ ಹಾನಿಯಾಗುವುದಿಲ್ಲ.

3. ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ನಿರ್ಮಿಸಲು ಕರ್ನಾಟಕ ರಾಜ್ಯವು ತನ್ನ ಸಾಂವಿಧಾನಿಕ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಜಲನೀತಿಯೂ ಸಹ ಕುಡಿಯುವ ನೀರಿಗೆ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಈ ಕುಡಿಯುವ ನೀರಿನ ಯೋಜನೆಯಿಂದ ನ್ಯಾಯಾಧಿಕರಣದ ಆದೇಶವನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸುವುದಿಲ್ಲ.

ಸಿಎಂ ಬೊಮ್ಮಾಯಿಯವರು ಮಂಡಿಸಿದ ಮೇಕೆದಾಟು ನಿರ್ಣಯದ ಬಗ್ಗೆ ಮಾತನಾಡಿದಂತ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ನಿರ್ಣಯವನ್ನು ವಿರೋಧ ಪಕ್ಷಗಳು ಅನುಮೋದಿಸುತ್ತವೆ, ನೆಲ, ಜಲ, ಭಾಷೆ ವಿಚಾರ ಬಂದಾಗ ಯಾವಾಗಲೂ ನಾವೆಲ್ಲ ಒಂದೆ ಎಂಬುದಾಗಿ ತಿಳಿಸಿದರು.

ಈ ಬಳಿಕ, ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತ ಸರ್ವಾನುಮತದ ನಿರ್ಣಯಕ್ಕೆ ಎಲ್ಲಾ ಪಕ್ಷಗಳಿಂದ ಧ್ವನಿಮತದ ಅಂಗೀಕಾರ ದೊರೆತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!