ಭಗತ್‌ ಸಿಂಗ್‌ ರಂತೆಯೇ ದೇಶಕ್ಕೆ ಪ್ರಾಣ ಕೊಟ್ಟಿದ್ದರು ಚಿಕ್ಕಪ್ಪ ಸ್ಮರಣ್‌ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಸ್ವರಣ್ ಸಿಂಗ್.. ಈ ಹೆಸರನ್ನು ಕೇಳಿದವರು ಕಡಿಮೆ. ಅಪ್ರತಿಮ ಸ್ವಾಂತಂತ್ರ್ಯ ಕಲಿಯಾಗಿದ್ದೂ ಚರಿತ್ರೆಯ ಪುಸ್ತಕದಲ್ಲಿ ಅಜ್ಞಾತರಾಗಿಯೇ ಉಳಿದವರು. ಇನ್ನೊಂದು ವಿಚಾರ ಗೊತ್ತಾ… ಈತ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ‌ ಖಾಸಾ ಚಿಕ್ಕಪ್ಪ.
1887 ರಲ್ಲಿ ಜುಲುಂದೂರಿನ ಖಟ್ಕರ್ ಕಲನ್ ಗ್ರಾಮದಲ್ಲಿ (ಈಗಿನ ಶಹೀದ್ ಭಗತ್ ಸಿಂಗ್ ನಗರ) ಜನಿಸಿದರು. ತಮ್ಮ ಹಿರಿಯ ಸಹೋದರರಾದ ಕಿಶನ್ ಸಿಂಗ್ ಮತ್ತು ಅಜಿತ್ ಸಿಂಗ್ ಅವರೊಂದಿಗೆ ಜುಲುಂದೂರಿನ ಸೈದಾಸ್ ಆಂಗ್ಲೋ ವೇದಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಆ ವೇಳಗೆ ಅವರ ಸಹೋದರರಿಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸ್ವರಣ್ ಸಿಂಗ್ ಅಣ್ಣಂದಿರ ಹೆಜ್ಜೆಗಳನ್ನೇ ಅನುಸರಿಸಿದರು. ಅಜಿತ್ ಸಿಂಗ್ ಲಾಹೋರ್‌ನಲ್ಲಿ ಭಾರತ್ ಮಾತಾ ಸೊಸೈಟಿ ಮತ್ತು ಮೊಹಬ್ಬತ್-ಎ-ವತನ್ ಸ್ಥಾಪಿಸಿ ಬ್ರಿಟೀಷರ ವಿರುದ್ಧ ಹೋರಾಡುವಲ್ಲಿ ಸ್ವರಣ್ ಸಿಂಗ್ ಪಾತ್ರವೂ ಮಹತ್ವದ್ದಾಗಿತ್ತು.
ಅಜಿತ್ ಸಿಂಗ್ ಅವರು ಬ್ರಿಟಿಷ್ ಆಳ್ವಿಕೆಯನ್ನು ಟೀಕಿಸುವ ಬಹಳಷ್ಟು ಉರ್ದು ಮತ್ತು ಇಂಗ್ಲಿಷ್‌ ಸಾಹಿತ್ಯವನ್ನು ಪ್ರಕಟಿಸುತ್ತಿದ್ದರು. ಈ ಸಾಹಿತ್ಯವನ್ನು ಜನರಿಗೆ ಮುಟ್ಟಿಸುವಲ್ಲಿ ತೆರೆಮರೆಯಲ್ಲಿ ಸ್ವರಣ್‌ ಸಿಂಗ್‌ರ ಅಪಾರ ಪರಿಶ್ರಮವಿತ್ತು. ಕ್ರಾಂತಿಕಾರಿ ಸಾಹಿತ್ಯಗಳಾದ ಬಂದ್ರ್ ಬಂಟ್, ಡಿವೈಡ್ ಅಂಡ್ ಕಾಂಕರ್, ಪೇಶ್ವಾ, ಹಿಂದೂಸ್ತಾನ್ ಮೇ ಅಂಗ್ರೇಜಿ ಹಕುಮತ್, ಅಮಾನತ್ ಮೇ ಖಯಾನತ್ ಮತ್ತು ಇತರ ಕ್ರಾಂತಿಕಾರಿ ಸಾಹಿತ್ಯವನ್ನು ಪ್ರಕಟಿಸಿದ ಆರೋಪವನ್ನೂ ಅವರು ಹೊತ್ತಿದ್ದರು.
ಅದೇ ಸಂದರ್ಭದಲ್ಲಿ ದೇಶದಲ್ಲಿ ಭೀಕರ ಬರಗಾಲವು ಅನೇಕ ಜನರನ್ನು ಕೊಂದಿತು. ಅಜಿತ್ ಸಿಂಗ್ ರಜಪುತಾನದಿಂದ ಅನಾಥ ಮಕ್ಕಳನ್ನು ಲಾಹೋರ್‌ಗೆ ಕರೆತಂದರು, ಸ್ವರಣ್ ಸಿಂಗ್ ಅವರು ಈ ಎಲ್ಲ ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದರು ಮತ್ತು ದೇಶ ಸೇವೆಗಾಗಿ ತರಬೇತಿ ನೀಡಿದರು.
1907ರಲ್ಲಿ ಬ್ರಟೀಷರು ಅಜಿತ್ ಸಿಂಗ್ ಅವರನ್ನು ಬರ್ಮಾದ ಮ್ಯಾಂಡಲೆ ಜೈಲಿಗೆ ಗಡಿಪಾರು ಮಾಡಿದ ಬಳಿಕ ಸ್ವರನ್‌ ಸಿಂಗ್‌ ಮತ್ತಷ್ಟು ಹರಿತವಾದರು, ಅವರು ಲಾಹೋರ್‌ನಿಂದ ಬ್ರಿಟಿಷ್ ವಿರೋಧಿ ಕರಪತ್ರಗಳನ್ನು ಪ್ರಕಟಿಸಿದರು. ಈ ವಿಚಾರ 1907ರ ಜುಲೈ 20 ರಂದು ನ್ಯಾಯಾಲಯದಿಂದ ವಿಚಾರಣೆಗೆ ಒಳಗಾಯಿತು ಮತ್ತು ಅವರಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಕ್ಷಯರೋಗದಿಂದ ಬಳಲುತ್ತಿರುವಾಗ ಜೈಲು ಅಧಿಕಾರಿಗಳಿಗೆ ಅವಿಧೇಯರಾಗಿದ್ದಕ್ಕಾಗಿ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು.
ಡಾ. ಗಂಡಾ ಸಿಂಗ್ ಅವರು ಗುಪ್ತಚರ ವರದಿಗಳ ಆಧರಿಸಿ ಸ್ವರಣ್‌ ಸಿಂಗ್‌ ಸ್ವಾತಂತ್ರ್ಯ ಚಟುವಟಿಕೆಗಳ ಕುರಿತಾಗಿ ಸ್ಪಷ್ಟವಾದ ವಿವರಣೆಯನ್ನು ʼಪಂಜಾಬ್‌ ಸೆಡಿಷಿಯಸ್ ಲಿಟರೇಚರ್ʼ ಪುಸ್ತಕದಲ್ಲಿ ಒದಗಿಸಿದ್ದಾರೆ.
ಜೈಲಿನಲ್ಲಿ ನಡೆದ ದೌರ್ಜನ್ಯದ ಪರಿಣಾಮವಾಗಿ ಸ್ವರಣ್‌ ಸಿಂಗ್‌ರ ಆರೋಗ್ಯ ಹದಗೆಟ್ಟಿತು. ಭಾರತೀಯ ಮಾತೃಭೂಮಿಯ ಈ ವೀರ ಪುತ್ರ ಜುಲೈ 20, 1910 ರಂದು ತಮ್ಮ 23 ನೇ ವಯಸ್ಸಿನಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!