October 6, 2026
Tuesday, October 6, 2026
spot_img

ಅಜೇಯ ಭಾರತ, ಅದ್ಭುತ ಸಾಧನೆ: ಹ್ಯಾಟ್ರಿಕ್ ಕಪ್ ಗೆದ್ದು ವಿಶ್ವಕಪ್‌ಗೆ ಲಗ್ಗೆ ಇಟ್ಟ ಜೂನಿಯರ್ ಹಾಕಿ ಟೀಮ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಹುಲುನ್‌ಬುಯಿರ್‌ನಲ್ಲಿ ನಡೆದ 2026ರ AHF ಜೂನಿಯರ್ ಮಹಿಳಾ ಹಾಕಿ ಏಷ್ಯಾಕಪ್ ಫೈನಲ್‌ನಲ್ಲಿ ಭಾರತದ ಯುವ ಆಟಗಾರ್ತಿಯರು ಅಸಾಧ್ಯ ಸಾಧನೆ ಮಾಡಿದ್ದಾರೆ. ಆತಿಥೇಯ ಚೀನಾ ತಂಡವನ್ನು ಅವರದ್ದೇ ಅಭಿಮಾನಿಗಳ ಎದುರು 1-0 ಗೋಲುಗಳಿಂದ ಸೋಲಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸತತ ಮೂರನೇ ಬಾರಿಗೆ ಈ ಪ್ರಶಸ್ತಿ ಗೆಲ್ಲುವ ಮೂಲಕ ‘ಹ್ಯಾಟ್ರಿಕ್’ ಸಾಧನೆ ಮಾಡಿ, ಮುಂಬರುವ FIH ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದಿದ್ದಾರೆ.

ಫೈನಲ್ ಪಂದ್ಯ ಆರಂಭದಿಂದಲೇ ರೋಚಕತೆಯಿಂದ ಕೂಡಿತ್ತು. ತವರಿನ ಪ್ರೇಕ್ಷಕರ ಭಾರಿ ಬೆಂಬಲದೊಂದಿಗೆ ಕಣಕ್ಕಿಳಿದ ಚೀನಾ ತಂಡಕ್ಕೆ ಭಾರತದ ಆಟಗಾರ್ತಿಯರು ಆರಂಭದಲ್ಲೇ ಸವಾಲೆಸೆದರು. ಪಂದ್ಯದ 2ನೇ ಕ್ವಾರ್ಟರ್‌ನ 17ನೇ ನಿಮಿಷದಲ್ಲಿ ಭಾರತದ ಸ್ಟ್ರೈಕರ್ ಸಾನಿಕಾ ಚಂದ್ರಕಾಂತ್ ಮಾನೆ, ಎದುರಾಳಿ ಚೀನಾದ ಗೋಲ್‌ಕೀಪರ್ ಕಣ್ಣಿಗೆ ಮಣ್ಣೆರಚಿ ಅದ್ಭುತ ಫೀಲ್ಡ್ ಗೋಲ್ ಬಾರಿಸಿದರು. ಈ ಒಂದು ಗೋಲು ಪಂದ್ಯದ ದಿಕ್ಕನ್ನೇ ಬದಲಿಸಿತು.

ನಂತರ ಚೀನಾ ತಂಡ ಸಮಬಲ ಸಾಧಿಸಲು ಎಷ್ಟೇ ಸರ್ಕಸ್ ಮಾಡಿದರೂ, ಭಾರತದ ಗೋಲ್‌ಕೀಪರ್ ಮತ್ತು ಡಿಫೆಂಡರ್‌ಗಳು ಕಲ್ಲಿನಂತೆ ನಿಂತು ಎದುರಾಳಿಗಳ ಎಲ್ಲಾ ಪ್ಲಾನ್‌ಗಳನ್ನು ಉಲ್ಟಾ ಮಾಡಿದರು.

ಈ ಟೂರ್ನಿಯಲ್ಲಿ ಭಾರತ ತಂಡ ಆಡಿದ ರೀತಿ ನಿಜಕ್ಕೂ ನೆಕ್ಸ್ಟ್ ಲೆವೆಲ್. ಮೊದಲ ಪಂದ್ಯದಲ್ಲೇ ಜಪಾನ್ ಅನ್ನು 7-0 ಅಂತರದಿಂದ ಧೂಳಿಪಟ ಮಾಡಿದ್ದ ಭಾರತ, ನಂತರ ಮಲೇಷ್ಯಾವನ್ನು 11-1 ಮತ್ತು ದಕ್ಷಿಣ ಕೊರಿಯಾವನ್ನು 4-1 ಅಂತರದಿಂದ ಸೋಲಿಸಿತು. ಲೀಗ್‌ ಹಂತದಲ್ಲಿ ಚೀನಾ ವಿರುದ್ಧ 0-0 ಡ್ರಾ ಮಾಡಿಕೊಂಡರೂ, ಆ ಬಳಿಕ ಪಾಕಿಸ್ತಾನವನ್ನು 19-0 ಅಂತರದಿಂದ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಸೆಮಿಸ್‌ನಲ್ಲಿ ಮತ್ತೆ ದಕ್ಷಿಣ ಕೊರಿಯಾವನ್ನು ಮಣಿಸಿ ಫೈನಲ್ ತಲುಪಿದ್ದ ಭಾರತ, ಕೊನೆಗೆ ಚೀನಾವನ್ನೂ ಸೋಲಿಸಿ ಅಜೇಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಹ್ಯಾಟ್ರಿಕ್ ಪ್ರಶಸ್ತಿ ಗೆದ್ದು ದೇಶದ ಕೀರ್ತಿಪತಾಕೆ ಹಾರಿಸಿದ ಯುವ ಆಟಗಾರ್ತಿಯರಿಗೆ ಹಾಕಿ ಇಂಡಿಯಾ ಭರ್ಜರಿ ಗಿಫ್ಟ್ ಪ್ರಕಟಿಸಿದೆ. ಚಾಂಪಿಯನ್ ತಂಡದ ಪ್ರತಿಯೊಬ್ಬ ಆಟಗಾರ್ತಿಗೆ ತಲಾ 3 ಲಕ್ಷ ಹಾಗೂ ಸಪೋರ್ಟಿಂಗ್ ಸ್ಟಾಫ್‌ನ ಪ್ರತಿಯೊಬ್ಬ ಸದಸ್ಯರಿಗೆ ತಲಾ 1.5 ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ. ಭಾರತೀಯ ಕ್ರೀಡಾಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಈ ಯುವ ಹಾಕಿ ಪಡೆಯ ಸಾಧನೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತೆ ಮಾಡಿದೆ.

Must Read