Monday, December 11, 2023

Latest Posts

ಅಂಡರ್- 19 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಬಾಂಗ್ಲಾ ಮೊದಲ ಎದುರಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

2024 ರಂದು ನಡೆಯಲ್ಲಿರುವ ಅಂಡರ್- 19 ವಿಶ್ವಕಪ್ (Under-19 World Cup) ವೇಳಾಪಟ್ಟಿಯನ್ನು ಐಸಿಸಿ (ICC) ಇಂದು ಪ್ರಕಟಿಸಿದೆ.

ಚಾಂಪಿಯನ್ ಭಾರತ ತಂಡ ಮುಂದಿನ ವರ್ಷ ಜನವರಿ 13ರಿಂದ ಫೆಬ್ರವರಿ 4ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಪುರುಷರ 19 ವಯೋಮಿತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಜಿಂಬಾಬ್ವೆ ಮುಖಾಮುಖಿಯಾಗಲಿವೆ.
19 ವರ್ಷದೊಳಗಿನವರ ವಿಶ್ವಕಪ್‌ನ 15 ನೇ ಆವೃತ್ತಿಯಲ್ಲಿ ಭಾಗವಹಿಸುವ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲೂ ನಾಲ್ಕು ತಂಡಗಳಿದ್ದು, ಅಂತಿಮವಾಗಿ, ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಮುನ್ನಡೆಯುತ್ತವೆ.

ಭಾರತ, ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಯುಎಸ್​ಎ ‘ಎ’ ಗುಂಪಿನಲ್ಲಿದ್ದರೆ, ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ. ‘ಸಿ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಜಿಂಬಾಬ್ವೆ, ನಮೀಬಿಯಾ ಮತ್ತು ಆತಿಥೇಯ ಶ್ರೀಲಂಕಾ ತಂಡಗಳಿದ್ದರೆ, ‘ಡಿ’ ಗುಂಪಿನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳು ಸೇರಿವೆ.

ಅಂಡರ್-19 ವಿಶ್ವಕಪ್ ಗುಂಪು ಹಂತದ ಪಂದ್ಯಗಳು ಜನವರಿ 13 ರಿಂದ 21ರ ನಡುವೆ ನಡೆಯಲಿವೆ. ಪ್ರತಿ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದ ತಂಡವು ತಮ್ಮ ಪಂದ್ಯಾವಳಿಯನ್ನು ಮುಗಿಸುವ ಮೊದಲು ಮತ್ತೊಂದು ನಾಲ್ಕನೇ ಸ್ಥಾನದ ತಂಡದ ವಿರುದ್ಧ ಇನ್ನೂ ಒಂದು ಪಂದ್ಯವನ್ನು ಆಡುತ್ತದೆ. ಗುಂಪು ಹಂತದ ನಂತರ 12 ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಮುನ್ನಡೆಯಲಿವೆ. ಈ ಮಾದರಿಯಲ್ಲಿ, ಆರು ತಂಡಗಳ ಎರಡು ಗುಂಪುಗಳನ್ನಾಗಿ ಮಾಡಲಾಗುತ್ತದೆ. ‘ಎ’ ಮತ್ತು ‘ಡಿ’ ಗುಂಪಿನ ಮೊದಲ ಮೂರು ತಂಡಗಳು ಒಂದು ಗುಂಪಿನಲ್ಲಿರುತ್ತವೆ. ‘ಬಿ’ ಮತ್ತು ‘ಸಿ’ ಗುಂಪಿನ ಅಗ್ರ ಮೂರು ತಂಡಗಳೊಂದಿಗೆ ಮತ್ತೊಂದು ಗುಂಪನ್ನು ರಚಿಸಲಾಗುತ್ತದೆ.

ಸೂಪರ್ ಸಿಕ್ಸ್ ಹಂತದಲ್ಲಿ ಪ್ರತಿ ತಂಡ ತಲಾ ಎರಡು ಪಂದ್ಯಗಳನ್ನು ಆಡಲಿದೆ. ಪ್ರಾಥಮಿಕ ಗುಂಪು ಹಂತದಲ್ಲಿ ಅವರು ತಮ್ಮ ಸ್ಥಾನದ ಆಧಾರದ ಮೇಲೆ ಇತರ ಗುಂಪುಗಳ ತಂಡಗಳನ್ನು ಎದುರಿಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!