ದಿಗಂತ ವರದಿ ಮಂಗಳೂರು:
ಸಾಗರಮಾಲಾ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ880 ಕೋಟಿ ರೂ. ಅಭಿವೃದ್ಧಿ ಯೋಜನೆ ಜಾರಿಗೊಳ್ಳಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂದರು, ಜಲಯಾನ, ಪ್ರವಾಸೋದ್ಯಮ ಹಾಗೂ ಮೀನುಗಾರಿಕಾ ಕ್ಷೇತ್ರಗಳನ್ನು ಒಳಗೊಂಡಂತೆ ಸಮಗ್ರ ಅಭಿವೃದ್ಧಿ ಗಮನದಲ್ಲಿರಿಸಿಕೊಂಡು ಸಾಗರಮಾಲಾ ಯೋಜನೆಯಡಿ 880 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಮೋದಿಸುವಂತೆ ಕೇಂದ್ರ ಬಂದರು ಹಾಗೂ ಜಲ ಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ವಿನಂತಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವರು ವಿವಿಧ ಯೋಜನೆಗಳಿಗೆ ಶೀಘ್ರವಾಗಿ ಅನೋಮೋದನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿ, ಕಾರ್ಗೋ ಹಾಗೂ ಕ್ರೂಸ್ ಟರ್ಮಿನಲ್ ನಿರ್ಮಾಣ ಯೋಜನೆಗೆ 350 ಕೋಟಿ ರೂ., ಹಳೆ ಮಂಗಳೂರು ಬಂದರು ಸಂಪರ್ಕ ರಸ್ತೆ ಅಭಿವೃದ್ಧಿಗೆ 98.೦೦ ಕೋಟಿ ರೂ., ಗುರುಪುರ ನದಿಯ ನಡುಗಡ್ಡೆಗಳ ಅಭಿವೃದ್ಧಿಗೆ 30.50 ಕೋಟಿ ರೂ., ಬಹು ಉಪಯೋಗಿ ಹಾರ್ಬರ್ ನಿರ್ಮಾಣಕ್ಕೆ ರೂ.100 ಕೋಟಿ ರೂ., ಬೆಂಗ್ರೆಯಲ್ಲಿ ಬೀಚ್ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ 10 ಕೋಟಿ ರೂ., ತೇಲುವ ಜೆಟ್ಟಿ ಅಳವಡಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ 10.68 ಕೋಟಿ ರೂ., ನೇತ್ರಾವತಿ ಹಾಗೂ ಗುರುಪುರ ನದಿಗಳಲ್ಲಿ ವಾಟರ್ ವೇ ಅಭಿವೃದ್ಧಿ ಯೋಜನೆಗೆ 280.58 ಕೋಟಿ ರೂ. ದೊರೆಯಲಿದೆ ಎಂದು ನಳಿನ್ ತಿಳಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸಚಿವರು ಮಂಗಳೂರಿಗೆ ಆಗಮಿಸಿದಾಗ ಜಿಲ್ಲೆಯ ವಿವಿಧ ಯೋಜನೆಗಳ ಅಭಿವೃದ್ದಿಯ ಬಗ್ಗೆ ನಳಿನ್ ಕುಮಾರ್ ಕಟೀಲು ಅವರು ಸಚಿವರಿಗೆ ಮನವರಿಕೆ ಮಾಡಿದ್ದರು.