Saturday, December 9, 2023

Latest Posts

ಯುನಿಕಾರ್ನ್ ಹಳತಾಯ್ತು, ಕಾಕ್ರೋಚ್ ಅನ್ನೋದು ಈಗ ನವೋದ್ದಿಮೆಯ ಟ್ರೆಂಡಿಂಗ್ ಪದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನವೋದ್ದಿಮೆಗಳಲ್ಲಿ ಯುನಿಕಾರ್ನ್‌ ಅನ್ನೋ ಪದವನ್ನು ನೀವು ಆಗಾಗ ಕೇಳಿರುತ್ತೀರಿ. ಭಾರತದ ನವೋದ್ದಿಮೆ ಕ್ಷೇತ್ರಗಳಲ್ಲಿ ನೂರು ಯುನಿಕಾರ್ನ್‌ ಗಳನ್ನು ದಾಟಿದೆ ಎಂಬ ಸುದ್ದಿಗಳನ್ನು ನೀವು ಓದಿರುತ್ತೀರಿ. ಒಂದು ಬಿಲಿಯನ್‌ ಡಾಲರ್‌ ತಲುಪಿದ ಉದ್ಯಮವನ್ನು ಸಾಮಾನ್ಯವಾಗಿ ಯುನಿಕಾರ್ನ್‌ ಎಂದು ಕರೆಯಲಾಗುತ್ತದೆ. ಅಂದರೆ ನವೋದ್ದಿಮೆಯು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದೆ ಎಂಬರ್ಥದಲ್ಲಿ ʼಯುನಿಕಾರ್ನ್‌ʼ ಎಂಬ ಪದವನ್ನು ಬಳಸಲಾಗುತ್ತದೆ.

ಆದರೆ ಇದೀಗ ನವೋದ್ದಿಮೆ ಕ್ಷೇತ್ರದಲ್ಲಿ ಯುನಿಕಾರ್ನ್‌ ಬದಲಾಗಿ ಹೊಸ ಪದವೊಂದು ಟ್ರೆಂಡಿಂಗ್‌ ನಲ್ಲಿದೆ. ಅದು ʼಕಾಕ್ರೋಚ್‌ʼ ಅಂದರೆ ಜಿರಲೆ ಎಂದರ್ಥ. ಜಿರಲೆಗಳು ಸಾಧಾರಣವಾಗಿ ಸಾಯುವುದಿಲ್ಲ. ತಲೆಯನ್ನು ದೇಹದಿಂದ ಬೇರ್ಪಡಿಸಿದರೂ 40 ದಿನಗಳವರೆಗೆ ಅವು ಬದುಕುಳಿಯುತ್ತವೆ ಎನ್ನಲಾಗುತ್ತದೆ. ಪರಮಾಣು ಬಾಂಬ್‌ ಸ್ಪೋಟ ನಡೆದ ಸ್ಥಾನದಲ್ಲಿಯೂ ಉಳಿದೆಲ್ಲ ಜೀವಿಗಳು ನಾಶವಾದರೂ ಜಿರಲೆಗಳು ಬದುಕುಳಿಯುತ್ತವೆ ಎಂಬ ಸಂಶೋಧನೆಗಳಿವೆ.

ಇದನ್ನೇ ಆಧಾರವಾಗಿಟ್ಟುಕೊಂಡು ನವೋದ್ದಿಮೆ ಕ್ಷೇತ್ರಗಳಲ್ಲಿಯೂ ಈಗ ʼಕಾಕ್ರೋಚ್‌ʼ ಎಂಬ ಪದ ಬಳಕೆಯಲ್ಲಿದೆ. ಸಂದಿಗ್ಧ ಪರಿಸ್ಥಿಯಲ್ಲಿಯೂ ಕ್ಲಿಷ್ಟ ಸಮಯದಲ್ಲಿ ಕೊಚ್ಚಿ ಹೋಗದೇ ದೃಢವಾಗಿ ನಿಂತುಕೊಳ್ಳುವ, ಆರ್ಥಿಕ ಹಿಂಜರಿತದಂತಹ ಪರಿಸ್ಥಿತಿಗಳಲ್ಲಿಯೂ ಬದುಕುಳಿಯ ಬಲ್ಲ ಸ್ಟಾರ್ಟಪ್‌ ಗಳಿಗೆ ಇದೀಗ ಕಾಕ್ರೋಚ್‌ ಎಂದು ಸಂಬೋಧಿಸಲಾಗುತ್ತಿದೆ.

ಆರಂಭಿಕ ಹಂತಗಳಲ್ಲಿ ಎಲ್ಲ ನವೋದ್ದಿಮೆಗಳೂ ಹಣಕ್ಕಾಗಿ ಅಥವಾ ಹೂಡಿಕೆಗಾಗಿ ಕಷ್ಟಪಡುತ್ತವೆ. ಆದರೆ ಇದೀಗ ಹಣಕಾಸಿನ ಚಳಿಗಾಲ ಪ್ರಾರಂಭವಾಗುತ್ತಿದ್ದು ಯಾವೆಲ್ಲಾ ಕಂಪನಿಗಳು ಜಿರಲೆಗಳಂತೆ ಬದುಕುಳಿಯುತ್ತವೆ ಎಂಬದ ಕುರಿತು ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಮಾರುಕಟ್ಟೆ ಪರಿಸ್ಥಿತಿಗಳನ್ನು ಬದಲಾಯಿಸಿದರೂ ತಮ್ಮ ವ್ಯವಹಾರ ಕಾರ್ಯತಂತ್ರ ರೂಪಿಸಿಕೊಂಡು ʼಕಾಕ್ರೋಚ್‌ʼ ಗಳಾಗಿ ಬದುಕುಳಿಯಬಲ್ಲ ಕಂಪನಿಗಳ ಬಗ್ಗೆ ನವೋದ್ದಿಮೆ ಕ್ಷೇತ್ರದಲ್ಲೀಗ ಚರ್ಚೆ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!