ಹೊಸದಿಗಂತ ಡಿಜಿಟಲ್ ಡೆಸ್ಕ್
2020 ರಲ್ಲಿ ಸಚಿನ್ ಪೈಲಟ್ ನೇತೃತ್ವದ ಕಾಂಗ್ರೆಸ್ ಶಾಸಕರ ಗುಂಪು ನಡೆಸಿದ್ದ ಬಂಡಾಯದಲ್ಲಿ ಬಿಜೆಪಿ ಪಾತ್ರವಿದೆ ಎಂಬ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆರೋಪಗಳು ಆಧಾರರಹಿತ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ತಳ್ಳಿಹಾಕಿದ್ದಾರೆ.
ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅಮಿತ್ ಶಾ ರಾಜ್ಯದಲ್ಲಿ ಸಚಿನ್ ಪೈಲಟ್ ನಡೆಸುತ್ತಿರುವ ಬಂಡಾಯದಲ್ಲಿ ಭಾಗಿಯಾಗಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದ್ದರು. ಪೈಲೆಟ್ ಗೆ ನಿಷ್ಠರಾಗಿರುವ ಕೆಲವು ಕಾಂಗ್ರೆಸ್ ಶಾಸಕರು ಒಂದು ತಿಂಗಳಿಗೂ ಹೆಚ್ಚು ಕಾಲ ಗುರುಗ್ರಾಮ್ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದರು. ಈ ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬಂಡಾಯ ಶಾಸಕರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದರು. ಜೊತೆಗೆ ಪೈಲಟ್ ಸೇರಿದಂತೆ ಪ್ರತಿಯೊಬ್ಬ ಶಾಸಕರಿಗೆ 10 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂಬುದಕ್ಕೆ ತಮ್ಮ ಬಳಿ ಪುರಾವೆ ಇದೆ ಎಂದು ಗೆಹ್ಲೋಟ್ ಆರೋಪಿಸಿದ್ದರು.
ರಾಜ್ಯ ಕಾಂಗ್ರೆಸ್‌ನೊಳಗಿನ ಬಿಕ್ಕಟ್ಟಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಪೂನಿಯಾ ಹೇಳಿದ್ದಾರೆ.
“ಕಳೆದ ನಾಲ್ಕು ವರ್ಷಗಳಿಂದ ಗೆಹ್ಲೋಟ್ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಮತ್ತು ಈ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಮತ್ತು ಈ ಸಂಚಿಕೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಸ್ಪಸ್ಟಪಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್, ರಾಜಸ್ಥಾನದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಆಗಮಿಸುವ ಮೊದಲೇ ಗೆಹ್ಲೋಟ್ ಅವರು “ಕಾಂಗ್ರೆಸ್ ತೋಡೋ ಯಾತ್ರೆ” ಆರಂಭಿಸಿದ್ದಾರೆ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಥೋಡ್, ‘ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಹೋರಾಟ ಸರ್ಕಾರದ ನಿರ್ಗಮನದೊಂದಿಗೆ ಕೊನೆಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.