ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ಮೋದಿ ಪರವಾಗಿ ಚಾದರ್ ಅರ್ಪಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೂಫಿ ಸಂತ ಖಾಜಾ ಮೊಹಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ ‘ಚಾದರ್’ ನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಶನಿವಾರ ಅಜ್ಮೀರ್ ದರ್ಗಾಕ್ಕೆ ಸಮರ್ಪಿಸಿದರು.

ದೆಹಲಿಯಿಂದ ಜೈಪುರಕ್ಕೆ ಬಂದ ಅವರು, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಅಜ್ಮೀರ್ ತಲುಪಿದರು.

ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು, ಪ್ರಧಾನ ಮಂತ್ರಿಯವರ ಸಹೋದರತ್ವ ಹಾಗೂ ದೇಶ ಒಗ್ಗಟ್ಟಾಗಿರಬೇಕು ಎನ್ನುವ ಸಂದೇಶದೊಂದಿಗೆ ಅಜ್ಮೀರ್ ಗೆ ತೆರಳುತ್ತಿದ್ದೇನೆ ಎಂದು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಅವರನ್ನು ಬಿಜೆಪಿಯ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಮುಖಂಡರು ಬರಮಾಡಿಕೊಂಡರು. ಉರ್ಸ್‌ನ ಈ ಶುಭ ಸಂದರ್ಭದಲ್ಲಿ, ದೇಶದಲ್ಲಿ ಉತ್ತಮ ವಾತಾವರಣ ಸೃಷ್ಟಿಸಲು ನಾವು ಬಯಸುತ್ತೇವೆ. ದೇಶದ ಸಾಮರಸ್ಯಕ್ಕೆ ಧಕ್ಕೆಯಾಗುವ ಕೆಲಸವನ್ನು ಯಾರು ಮಾಡಬಾರದು ಎಂದು ರಿಜಿಜು ಹೇಳಿದರು.

ಹಿಂದು, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಪಾರ್ಸಿ, ಬೌದ್ಧ ಅಥವಾ ಜೈನ್, ಎಲ್ಲರನ್ನೂ ದರ್ಗಾದಲ್ಲಿ ಸ್ವಾಗತಿಸಲಾಗುತ್ತದೆ. ಲಕ್ಷಾಂತರ ಜನರು ದರ್ಗಾಕ್ಕೆ ಭೇಟಿ ನೀಡುತ್ತಿದ್ದು, ಅವರಿಗೆ ಯಾವ ತೊಂದರೆ ಆಗದು, ಪ್ರಕ್ರಿಯೆ ಸರಳವಾಗಿರಬೇಕು ಎಂದು ರಿಜಿಜು ಹೇಳಿದರು.

ದರ್ಗಾವನ್ನು ಶಿವ ದೇಗುಲದ ಮೇಲೆ ನಿರ್ಮಿಸಲಾಗಿದೆ ಎಂದು ಸ್ಥಳೀಯ ಕೋರ್ಟ್ ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಾದರ್ ಅರ್ಪಿಸಲಷ್ಟೇ ಬಂದಿದ್ದೇನೆ. ಏನನ್ನೂ ಪ್ರದರ್ಶಿಸಲೋ ಅಥವಾ ಏನಾದರೂ ಹೇಳಲು ಬಂದಿಲ್ಲ. ದೇಶದ ಜನರೆಲ್ಲರೂ ನೆಮ್ಮದಿಯಿಂದ ಇರಬೇಕು ಎನ್ನುವ ಪ್ರಧಾನಿ ಮೋದಿ ಅವರ ಸಂದೇಶದೊಂದಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!