ಹೊಸದಿಗಂತ ಡಿಜಿಟಲ್ ಡೆಸ್ಕ್;
ಮಂಡ್ಯ ನಗರ ವರ್ತುಲ ರಸ್ತೆಯನ್ನು ಕೈಗೆತ್ತಿಕೊಂಡು ಅನುಷ್ಠಾನಕ್ಕೆ ಬೇಗನೆ ತರುವಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸಂಸತ್ ಭವನದಲ್ಲಿರುವ ಗಡ್ಕರಿ ಅವರ ಕಚೇರಿಗೆ ತೆರಳಿ ಭೇಟಿಯಾದ ಕುಮಾರಸ್ವಾಮಿ ಅವರು, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ಯೋಜನೆಗೆ ಡಿಪಿಆರ್ ಮಾಡಿದೆ. ಆದರೆ ಪ್ರಾಧಿಕಾರದ ಅಂದಾಜು ವೆಚ್ಚ ಯೋಜನೆಗೆ ಸಾಕಾಗುವುದಿಲ್ಲ. 900 ಕೋಟಿ ರೂ. ವೆಚ್ಚದ ಪರಿಷ್ಕೃತ ಯೋಜನೆಗೆ ಒಪ್ಪಿಗೆ ಕೊಟ್ಟು ಅನುಷ್ಠಾನಗೊಳಿಸಬೇಕು ಎಂದು ಸಚಿವರು ಮಾಡಿದ ಮನವಿಗೆ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ವೇಳೆ ಜೇವರ್ಗಿ-ಚಾಮರಾಜನಗರನಡುವೆ ಮೇಲುಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥ ಹೆದ್ದಾರಿಯನ್ನಾಗಿ ಅಭಿವೃದ್ಧಿ ಮಾಡುವ ಬಗ್ಗೆಯು ಚರ್ಚೆ ನಡೆಸಿದರು.
ಜೇವರ್ಗಿ- ಚಾಮರಾಜನಗರ ನಡುವೆ ಪಾಂಡವಪುರದ ಹೆದ್ದಾರಿ 150ಎ ದ್ವಿಪಥ ಹೆದ್ದಾರಿಯನ್ನು 597-560 ಕಿ.ಮೀನಿಂದ 606-670 ಕಿ.ಮೀ. ಚತುಷ್ಪಥ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸಲು ಒಪ್ಪಿಗೆ ಕೊಡಬೇಕು ಹಾಗೂ ಪಾಂಡವಪುರ (Pandavapura) ರೈಲು ನಿಲ್ದಾಣದ ಬಳಿ ಇರುವ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ರೈತರ ಅನುಕೂಲಕ್ಕಾಗಿ ಹೆದ್ದಾರಿ ಪಕ್ಕದಲ್ಲಿಯೇ ಟ್ರಕ್ ವೇ ನಿರ್ಮಾಣ ಮಾಡಬೇಕು. ಇತ್ತೀಚೆಗೆ ತಾವು ಯೋಜನೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದಾಗ ಸ್ಥಳೀಯ ಜನರು ಈ ಬಗ್ಗೆ ಮನವಿ ಮಾಡಿದ್ದರು. ಅಲ್ಲದೆ, ಖುದ್ದು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದೇನೆ. ಹೀಗಾಗಿ ಟ್ರಕ್ ವೇ ನಿರ್ಮಾಣ ಅಗತ್ಯವಾಗಿ ಆಗಬೇಕಿದೆ ಎಂದು ಮನವಿ ಮಾಡಿದರು.