ಅಂಕಿಸಂಖ್ಯೆಗಳೊಂದಿಗೆ ಪ್ರತಿಪಕ್ಷ ಆಡಳಿತ ರಾಜ್ಯಗಳ ಪೆಟ್ರೋಲ್ ರಾಜಕೀಯ ಪ್ರಶ್ನಿಸಿದ ಕೇಂದ್ರ ಸಚಿವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಧನದ ಮೇಲಿನ ತೆರಿಗೆಯ ಲಾಭದ ಶೇ.68 ರಷ್ಟು ಭಾಗವನ್ನು ಕೇಂದ್ರ ಸರ್ಕಾರವೇ ಪಡೆದುಕೊಳ್ಳುತ್ತಿದೆ, ಹಾಗಿದ್ದರೂ ಪ್ರಧಾನಿ ಮೋದಿ ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯಗಳನ್ನು ದೂರುತ್ತಿದ್ದಾರೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕೆಗೆ ಖಡಕ್‌ ತಿರುಗೇಟು ನೀಡಿರುವ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಪ್ರತಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳ ಪೆಟ್ರೋಲ್ ರಾಜಕೀಯವನ್ನು ಅಂಕಿಸಂಖ್ಯೆಗಳ ಸಮೇತ ಬಯಲು ಮಾಡಿದ್ದಾರೆ.
ಸರಣಿ ಟ್ವಿಟ್‌ ಗಳನ್ನು ಮಾಡುವ ಮೂಲಕ ಕಾಂಗ್ರೆಸ್‌ ಯುವರಾಜನ ಆರೋಪಗಳಿಗೆ ಪುರಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.  ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್‌ ಗೆ  ₹14.50 ರಿಂದ 17.50 ರು. ವ್ಯಾಟ್ ತೆರಿಗೆ ವಿಧಿಸಲಾಗಿದೆ. ಆದರೆ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳು ವಿಧಿಸುತ್ತಿರುವ ತೆರಿಗೆಗಳ ಪ್ರಮಾಣ ಲೀಟರ್‌ ಗೆ ₹26 ರಿಂದ 32 ರು.ಗಳಷ್ಟಿದೆ. ಇಲ್ಲಿಯೇ ವ್ಯತ್ಯಾಸ ಸ್ಪಷ್ಟವಾಯಿತಲ್ಲವೇ. ಕಾಂಗ್ರೆಸ್ಸಿನ ಉದ್ದೇಶ ವಿನಾಕಾರಣ ಪ್ರತಿಭಟನೆ ಮತ್ತು ಟೀಕೆ ಮಾತ್ರವೇ ಹೊರತು ಜನರಿಗೆ ಪರಿಹಾರ ನೀಡುವುದಲ್ಲ ಎಂದು ಅವರು ಅಂಕಿಸಂಖ್ಯೆಗಳ ಸಮೇತ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಸತ್ಯ‌ ವಿಚಾರವು ಯಾವಾಗಲೂ ನೋವುಂಟು ಮಾಡುವಂತಹದ್ದು. ಆದರೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ.  ಬಿಜೆಪಿ ಆಡಳಿತವಿರುವ ಹರಿಯಾಣದಲ್ಲಿ ಪೆಟ್ರೋಲ್ ಮೇಲೆ 18% ಮತ್ತು ಡೀಸೆಲ್ ಮೇಲೆ 16% ವ್ಯಾಟ್ ಇದೆ. ಈ ಪ್ರಮಾಣ ದೇಶದಲ್ಲೇ ಅತ್ಯಂತ ಕಡಿಮೆ. ಹಾಗಿದ್ದರೂ ದೇಶದ ಮಹತ್ವಾಕಾಂಕ್ಷಿ ನಾಯಕ(ರಾಹುಲ್)ರೊಬ್ಬರು ಇವುಗಳ ವಿರುದ್ಧ ಪ್ರತಿಭಟಿಸುತ್ತಾರೆ, ಆದರೆ ವಿಪರ್ಯಾಸವೆಂದರೆ ಅವರದೇ ಪಕ್ಷದ ಆಳ್ವಿಕೆಯಿರುವ ರಾಜಸ್ಥಾನದ ಬಗ್ಗೆ ಮೌನವಾಗಿದ್ದಾರೆ, ಅಲ್ಲಿ ಬರೋಬ್ಬರಿ 31.08% ಸೆಸ್ ತೆರಿಗೆಯಿದೆ. ಅದು ದೇಶದಲ್ಲೇ ಅತ್ಯಧಿಕ! ಎಂದು ಪುರಿ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

 

ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ತಾವು ಅಮದು ಮಾಡಿಕೊಳ್ಳುವ ಮದ್ಯಕ್ಕೆ ದುಬಾರಿ ಬೆಲೆತೆರುವ ಬದಲು ಇಂಧನದ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದರೆ ಪೆಟ್ರೋಲ್ ಬೆಲೆ ತನ್ನಷ್ಟಕ್ಕೆ  ತಾನೇ ಅಗ್ಗವಾಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಲೀಟರ್ ಪೆಟ್ರೋಲ್‌ಗೆ ₹32.15 ರು.ತೆರಿಗೆ  ವಿಧಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಉತ್ತರಾಖಂಡ್ ನಲ್ಲಿ ಕೇವಲ ₹14.51 ರು. ಮತ್ತು ಉತ್ತರ ಪ್ರದೇಶದಲ್ಲಿ ₹16.50 ರು. ಮಾತ್ರವೇ ತೆರಿಗೆ ವಿಧಿಸುತ್ತದೆ ಎಂದು ಅವರು ವಾಸ್ತವ ಸಂಗತಿಯನ್ನು ತೆರೆದಿಟ್ಟಿದ್ದಾರೆ.

ಮಹಾರಾಷ್ಟ್ರ ಸರ್ಕಾರವು 2018 ರಿಂದ ಬರೊಬ್ಬರಿ ₹79,412 ಕೋಟಿ ಇಂಧನ ತೆರಿಗೆಯನ್ನು ಸಂಗ್ರಹಿಸಿದೆ. ಈ ವರ್ಷವೂ 33,000 ಕೋಟಿ ಸಂಗ್ರಹಿಸುವ ನಿರೀಕ್ಷೆಯಿದೆ. (ಒಟ್ಟು ₹1,12,757 ಕೋಟಿ) ಇಷ್ಟೊಂದು ತೆರಿಗೆ ಹಣ ಸಂಗ್ರಹವಿದ್ದರೂ ಜನರಿಗೆ ಪರಿಹಾರ ನೀಡಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಏಕೆ ಕಡಿಮೆ ಮಾಡುತ್ತಿಲ್ಲ? ಎಂದು ಹರ್ದೀಪ್‌ ಪುರಿ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!