ಗೂಗಲ್, ಫೇಸ್ಬುಕ್ ಥರದ ತಂತ್ರಜ್ಞಾನ ದೈತ್ಯರಿಗೆ ಮೂಗುದಾರ ಹಾಕುವುದಕ್ಕೆ ಬ್ರಿಟನ್ ಚಿಂತನೆ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಗೂಗಲ್, ಫೇಸ್ಬುಕ್ ಥರದ ತಂತ್ರಜ್ಞಾನ ದೈತ್ಯರು ನೀವು ಏನನ್ನು ನೋಡಬೇಕು, ಏನನ್ನು ಖರೀದಿಸಬೇಕು ಎಂಬುದನ್ನೆಲ್ಲ ಬಹುತೇಕ ಅವುಗಳ ಮೂಲಕವೇ ನಿರ್ಧರಿಸುವಂತೆ ಮಾಡುತ್ತಿರುವುದು ಒಂದು ಜಾಗತಿಕ ವಿದ್ಯಮಾನ. ಈ ನಿಟ್ಟಿನಲ್ಲಿ ಇದನ್ನು ನಿಯಂತ್ರಿಸುವ ವ್ಯವಸ್ಥೆಯೊಂದನ್ನು ತರುವುದಕ್ಕೆ ಬ್ರಿಟಿಷ್ ಸರ್ಕಾರ ಚಿಂತಿಸುತ್ತಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಮುಖ್ಯವಾಗಿ ಈ ಹೊಸ ವ್ಯವಸ್ಥೆಯು ತಂತ್ರಜ್ಞಾನ ವಿಭಾಗದಲ್ಲಿ ಏಕಸ್ವಾಮ್ಯ ಸಾಧಿಸುವ ದೈತ್ಯ ಕಂಪನಿಗಳ ಓಟಕ್ಕೆ ಬ್ರೇಕ್ ಹಾಕಲಿದೆ.

  • ಗೂಗಲ್, ಫೇಸ್ಬುಕ್, ಆಪಲ್ ಥರದ ಎಲ್ಲ ದೊಡ್ಡ ಕಂಪನಿಗಳೂ ತಾವು ಬಳಕೆದಾರರಿಂದ ಸಂಗ್ರಹಿಸಿರುವ ದತ್ತಾಂಶವನ್ನು ಬಳಕೆದಾರರ ನಿಯಂತ್ರಣದಲ್ಲಿಯೇ ಇರುವಂತೆ ವ್ಯವಸ್ಥೆ ರೂಪಿಸಬೇಕು. ಅಂದರೆ ಒಂದು ಸಾಮಾಜಿಕ ವೇದಿಕೆಯಿಂದ ಇನ್ನೊಂದು ವೇದಿಕೆಗೆ ಸ್ಥಳಾಂತರವಾದರೆ ಬಳಕೆದಾರ ತನಗೆ ಸೇರಿದ ಮಾಹಿತಿಗಳನ್ನು ಕೊಂಡೊಯ್ಯುವಂಥ ವ್ಯವಸ್ಥೆ ರೂಪಿಸುವುದಕ್ಕೆ ಒತ್ತಡ.
  • ಬೇರೆ ಬೇರೆ ಸುದ್ದಿ ಮಾಧ್ಯಮದ ಲಿಂಕುಗಳನ್ನು ಬಿತ್ತರಿಸುವ ಗೂಗಲ್, ಫೇಸ್ಬುಕ್ ಥರದ ಮಾಧ್ಯಮ ಆ ಮೂಲಕ ಭಾರಿ ಪ್ರಮಾಣದ ಜಾಹೀರಾತು ಹಣ ತಮ್ಮದಾಗಿಸಿಕೊಳ್ಳುತ್ತಿವೆ. ಆದರೆ ಈ ಸುದ್ದಿ ಇಲ್ಲವೇ ಸರಕನ್ನು ಸೃಷ್ಟಿಸಿದ ಮೂಲದವರಿಗೆ ಈ ಆದಾಯವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಹಂಚಲಾಗುತ್ತಿದೆ. ಈ ಕುರಿತ ನ್ಯಾಯಬದ್ಧ ಹಂಚಿಕೆಗೆ ನಿಯಮ ಬರಲಿದೆ.
  • ಇವತ್ತು ಗೂಗಲ್ ಥರದ ಅಥವಾ ಫೇಸ್ಬುಕ್ ಥರದ ಇನ್ನೊಂದು ತಾಣ ಏಕೆ ಅಭಿವೃದ್ಧಿಯಾಗಿಲ್ಲ ಎಂದರೆ, ಈ ಕಂಪನಿಗಳು ತಮ್ಮ ಪ್ರತಿಸ್ಪರ್ಧಿಗಳನ್ನು ಬೆಳೆಯುವ ಹಂತದಲ್ಲೇ ಖರೀದಿಸಿ ಮುಗಿಸಿಬಿಡುತ್ತವೆ. ದೈತ್ಯ ಕಂಪನಿಗಳು ಬೇರೆ ಕಂಪನಿಗಳನ್ನು ವಿಲೀನಗೊಳಿಸಿಕೊಳ್ಳುವ ಪ್ರಕ್ರಿಯೆಯು ಸರ್ಕಾರದ ಗಮನ ಮತ್ತು ವಿವೇಚನೆಗಳಿಗೆ ಮೊದಲೇ ಬರಬೇಕಾದ ವ್ಯವಸ್ಥೆಯೊಂದನ್ನು ಸೃಷ್ಟಿಸಲಾಗುತ್ತಿದೆ.

ಈ ಮೇಲೆ ಹೇಳಿದ ಅಂಶಗಳೆಲ್ಲವೂ ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಅದಕ್ಕೊಂದು ಕಾನೂನೇ ರೂಪುಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ತಯಾರಿ ಆಗುತ್ತಿದೆ ಎಂದು ಬಿಬಿಸಿ ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!