ವಿಶ್ವವಿದ್ಯಾಟ್ರೋಫಿ 2022 ವಾಲಿಬಾಲ್ ಪಂದ್ಯಾವಳಿ: ಕಮಟಾ ಹೆಗಡೆ ಎ ತಂಡ ಚಾಂಪಿಯನ್

ಹೊಸದಿಗಂತ ವರದಿ, ಅಂಕೋಲಾ:

ವಿಷ್ಣುಗುಪ್ತ ವಿದ್ಯಾಪೀಠ ಅಶೋಕೆ ಗೋಕರ್ಣ ಇವರು ಆಯೋಜಿಸಿದ್ದ ವಿಶ್ವವಿದ್ಯಾಟ್ರೋಫಿ 2022 ವಾಲಿಬಾಲ್ ಪಂದ್ಯಾವಳಿಯಲ್ಲಿ ಕಮಟಾ ಹೆಗಡೆ ಎ ತಂಡ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದು ಹೆಗಡೆ ಬಿ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಹೆಗಡೆಯ ವಾಲಿಬಾಲ್ ತಂಡಗಳು ಪಂದ್ಯಾವಳಿಯಲ್ಲಿ ಮಿಂಚಿದವು.
ಕಾರ್ಯಕ್ರಮದ ದಿವ್ಯ ಸಾನ್ನಿದ್ಯವನ್ನು ವಹಿಸಿದ್ದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಮಾತನಾಡಿ
ಧರ್ಮನಿಷ್ಠ ,ರಾಷ್ಟ್ರನಿಷ್ಠ ಸಮಾಜದ ನಿರ್ಮಾಣಕ್ಕೆ ಸಂಸ್ಕಾರಯುತ ಶಿಕ್ಷಣದ ಅಗತ್ಯತೆ ಇದೆ, ಸಂಸ್ಕಾರದ ಶಿಕ್ಷಣ ನೀಡುವ ಸಂಕಲ್ಪದಿಂದ ಆರಂಭಿಸಲಾಗಿರುವ ವಿಧ್ಯಾಪೀಠಕ್ಕೆ ಸಮಾಜದ ಉತ್ತಮ ಸ್ಪಂದನೆ ದೊರಕಿದೆ ಎಂದರು.
ಶಿಕ್ಷಣ ಕೇವಲ ಪಠ್ಯ ವಿಷಯಗಳಿಗೆ ಸೀಮಿತಾಗದೇ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಕೊಡುಗೆ ನೀಡುವ ಅಗತ್ಯತೆ ಇದೆ ಅಶೋಕೆಯ ವಿದ್ಯಾಪೀಠ ಅಂತರಾಷ್ಟ್ರೀಯ ದರ್ಜೆಯ ಆಧುನಿಕ ಶಿಕ್ಷಣದ ಜೊತೆಯಲ್ಲಿ ಭಾರತೀಯ ಸಂಸ್ಕೃತಿಯ ಅಂಗವೆನಿಸಿದ ಪ್ರಾಚೀನ ಶಿಕ್ಷಣ, ಕಲೆಗಳ ಕಲಿಕೆಗೂ ಸಮಾನ ಮಹತ್ವ ನೀಡುತ್ತಿದೆ ವೇದ, ವಾಸ್ತುಶಾಸ್ತ್ರ, ಜ್ಯೋತಿಷ್ಯ, ಆಯುರ್ವೇದ, ವೃಕ್ಷಾಯುರ್ವೇದ, ಸಮರ ಕಲೆ, ಸಂಗೀತ ,ನೃತ್ಯ ಮೊದಲಾದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ ಎಂದ ಅವರು ಭಾರತೀಯ ಪರಂಪರೆಗೆ ಒತ್ತು ನೀಡುವ ಗುರುಕುಲ ಮಾದರಿ ಶಿಕ್ಷಣವನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು ಎಂದು ಹೇಳಿದರು.
ಪಂದ್ಯಾವಳಿಗೆ ಚಾಲನೆ ನೀಡಿದ ಪಶು ಸಂಗೋಪನಾ ಸಚಿವ ಪ್ರಭು ಬಿ ಚವ್ಹಾಣ ಅವರು ಮಾತನಾಡಿ ದೇಶಿಯ ಕ್ರೀಡೆಗಳತ್ತ ಯುವಕರು ಹೆಚ್ಚಿನ ಒಲವು ತೋರುವ ಮೂಲಕ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳಸಬೇಕು ಎಂದರು.
ರಾಮಚಂದ್ರಾಪುರ ಮಠ ರಾಷ್ಟ್ರ ಗೋಮಾತೆ ರಕ್ಷಣೆ ಮತ್ತು ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡಿ ಆ ದಿಶೆಯಲ್ಲಿ ಸೇವೆ ಸಲ್ಲಿಸುತ್ತ ಬರುತ್ತಿದ್ದು ಗೋ ಸಂಕುಲವನ್ನು ರಕ್ಷಿಸಿ ಆದರ್ಶ ಶಿಕ್ಷಣದ ಮೂಲಕ ಮಾದರಿ ರಾಷ್ಟ್ರವನ್ನು ಕಟ್ಟುವ ಶ್ರೀಗಳ ಸಂಕಲ್ಪಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಸಚಿವ ಚವ್ಹಾಣ ಕರೆ ನೀಡಿದರು.
ವಿಷ್ಣುಗುಪ್ತ ವಿದ್ಯಾಪೀಠದ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಪ್ರಾಚಾರ್ಯ ಮಹೇಶ ಹೆಗಡೆ, ಗ್ರಾ.ಪಂ ಸದಸ್ಯ ಸಂದೇಶ. ಜಿ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!