ಅವಿವಾಹಿತ ಜೋಡಿಗೆ ಶಾಕ್ ಕೊಟ್ಟ OYO: ಇನ್ಮುಂದೆ ನೋ ರೂಮ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಓಯೋ ಹೋಟೆಲ್‌ (OYO) ಬುಕ್ಕಿಂಗ್‌ ಕಂಪನಿ ಚೆಕ್‌ ಇನ್‌ಗೆ ಸಂಬಂಧಿಸಿದಂತೆ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮವನ್ನು ಜಾರಿಗೊಳಿಸಿದೆ. ಅದರಂತೆ ಇನ್ಮುಂದೆ ಅವಿವಾಹಿತ ಪುರುಷ – ಮಹಿಳಾ ಜೋಡಿಗೆ ಹೊಟೇಲ್ ಗಳಲ್ಲಿ ಅನುಮತಿ ಇರುವುದಿಲ್ಲ ಎಂದು ಹೇಳಿದೆ.

ಹೌದು.. ತನ್ನ ಸಂಗಾತಿಯೊಂದಿಗೆ ಆತ್ಮೀಯ ಖಾಸಗಿ ಸಮಯ ಕಳೆಯಲು ಮೊದಲ ಆಯ್ಕೆಯಾಗಿದ್ದ ಓಯೋ ಇದೀಗ ತನ್ನ ‘ನೆಚ್ಚಿನ ಗ್ರಾಹಕ’ರಿಗೆ ಶಾಕ್ ನೀಡಿದ್ದು, ಇನ್ನು ಮುಂದೆ ಅವಿವಾಹಿತ ಜೋಡಿಗಳಿಗೆ ತನ್ನ ಹೊಟೇಲ್​ ರೂಮ್​ಗಳನ್ನು ಬಾಡಿಗೆ ನೀಡುವುದಿಲ್ಲ ಎಂದು ಹೇಳಿದೆ.

ತನ್ನ ಪಾಲುದಾರ ಹೊಟೇಲ್ ಗಳಿಗಾಗಿ ಹೊಸ ಚೆಕ್ ಇನ್ ಮಾರ್ಗಸೂಚಿಗಳನ್ನು ಹೊರಡಿಸಿರುವ ಓಯೋ, ಮೊದಲಿಗೆ ಮೀರತ್​ನಿಂದ ಇವುಗಳನ್ನು ಜಾರಿಗೊಳಿಸಲು ಆರಂಭಿಸಿದೆ. ಪರಿಷ್ಕೃತ ನೀತಿಯ ಅಡಿಯಲ್ಲಿ, ಪುರುಷ ಮತ್ತು ಮಹಿಳಾ ಜೋಡಿಗಳು ಆನ್​ಲೈನ್ ಬುಕಿಂಗ್ ಮಾಡುವಾಗ ಅಥವಾ ಚೆಕ್ ಇನ್ ಮಾಡುವಾಗ ಅವರು ತಮ್ಮ ಮಧ್ಯದ ಸಂಬಂಧವನ್ನು ತೋರಿಸುವ ಪುರಾವೆಗಳನ್ನು ನೀಡುವುದು ಕಡ್ಡಾಯವಾಗಲಿದೆ.

ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳನ್ನು ನೋಡಿಕೊಂಡು ಪಾಲುದಾರ ಹೊಟೇಲ್​ಗಳು ಸಂಗಾತಿಗಳಿಗೆ ರೂಮ್ ನೀಡುವ ಅಥವಾ ನೀಡದಿರುವ ಬಗ್ಗೆ ವಿವೇಚನೆಯಿಂದ ನಿರ್ಧರಿಸಬಹುದು ಎಂದು ಕಂಪನಿ ತಿಳಿಸಿದೆ.

ಹೊಸ ನಿಯಮಗಳನ್ನು ತಕ್ಷಣದಿಂದ ಜಾರಿಗೆ ತರುವಂತೆ ಓಯೋ ಮೀರತ್‌ನಲ್ಲಿರುವ ತನ್ನ ಪಾಲುದಾರ ಹೊಟೇಲ್​ಗಳಿಗೆ ನಿರ್ದೇಶನ ನೀಡಿದೆ. ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ಕಂಪನಿಯು ಇದನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸಬಹುದು ಎಂದು ಮೂಲಗಳು ತಿಳಿಸಿವೆ.

ದೇಶದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪನಿಗಳಲ್ಲಿ ಓಯೋ ಕೂಡ ಒಂದಾಗಿದೆ. ದೇಶದ ಎಲ್ಲಾ ನಗರಗಳಲ್ಲಿಯೂ ತನ್ನಹೊಟೇಲ್ ಬುಕ್ಕಿಂಗ್‌ ಜಾಲವನ್ನು ವಿಸ್ತರಣೆ ಮಾಡಿಕೊಂಡಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ ಈ ಓಯೋ ಹೊಟೇಲ್ಗಳು ಹೆಸರುವಾಸಿಯಾಗಿವೆ. ಅದರಲ್ಲೂ ಅವಿವಾಹಿತರಿಗೆ ಹೊಟೇಲ್ ಚೆಕ್‌ಇನ್‌ಗೆ ಅವಕಾಶ ನೀಡುವ ಕಾರಣಕ್ಕೆ ಈ ಹೊಟೇಲ್ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಇದೀಗ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮ ಜಾರಿಗೊಳಿಸಿದೆ.

ಹೊಸ ನಿಯಮದ ಪ್ರಕಾರ, ಹೊಟೇಲ್ ಗೆ ಬರುವ ಜೋಡಿಗಳು ಕಡ್ಡಾಯವಾಗಿ ತಮ್ಮ ಸಂಬಂಧದ ದಾಖಲೆ ತರುವುದು ಕಡ್ಡಾಯವಾಗಿದೆ. ಆನ್‌ಲೈನ್ ಬುಕ್ಕಿಂಗ್‌ಗೂ ಕೂಡಾ ಇದು ಕಡ್ಡಾಯವಾಗಿದೆ. ಬೇರೆ ನಗರಗಳಿಗೂ ಇದೆ ನಿಯಮ ವಿಸ್ತರಿಸುವ ಬಗ್ಗೆ ಯೋಚನೆ ಮಾಡಲಾಗುವುದು. ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಓಯೋ ಉತ್ತರ ಭಾರತ ಪ್ರಾದೇಶಿಕ ಮುಖ್ಯಸ್ಥ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!