Monday, November 28, 2022

Latest Posts

ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿದ್ದಕ್ಕೆ ಧನ್ ಸಿಂಗ್ ಮನೆಯನ್ನೇ ಸುಟ್ಟು ಹಾಕಿದ್ದ ಬ್ರಿಟಿಷರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ ನಾಗರಿಕ ಅಸಹಕಾರ ಚಳುವಳಿಯು ವಸಾಹತುಶಾಹಿ ಭಾರತದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ಈ ಚಳುವಳಿಗೆ ಉತ್ತರಾಖಂಡದ ಕುಮಾವೂನ್‌ನಲ್ಲಿ ಹೆಗಲು ಕೊಟ್ಟವರಲ್ಲಿ ಧನ್ ಸಿಂಗ್ ನೇಗಿ ಕೂಡ ಒಬ್ಬರು.
ಧನ್ ಸಿಂಗ್ ಸಿಮ್ಯಾಲ್ ಅವರು ಉತ್ತರಾಖಂಡ್‌ ನ ರಾಮಗಢದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಜವಾಹರ್ ಸಿಂಗ್ ನೇಗಿ. ಅವರೂ ಸಹ 1930ರಲ್ಲಿ ಗಾಂಧೀಜಿ ಆರಂಭಿಸಿದ ಝಂಡಾ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಧನ್ ಸಿಂಗ್ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕೆ ಬ್ರಿಟೀಷರು ಕ್ರೂರವಾಗಿ ಪ್ರತಿಕಾರ ತೀರಿಸಿಕೊಂಡರು. ಧನ್ ಸಿಂಗ್ ಮನೆಗೆ ನುಗ್ಗಿದ ನಾಲ್ವರು ಬ್ರಿಟೀಷ್ ಬಂದೂಕುಧಾರಿಗಳು ಮನೆಯಲ್ಲಿದ್ದ ಆಹಾರ ಧಾನ್ಯಗಳು, ಪಾತ್ರೆಗಳು, ಬಟ್ಟೆಗಳನ್ನು ಎತ್ತಿಕೊಂಡು ಹೊರಗೆ ಎಸೆದರು. ಎಲ್ಲಾ ವಸ್ತುಗಳನ್ನು ಸೇರಿಸಿ ಮನೆಗೆ ಬೆಂಕಿಕೊಟ್ಟು ಸುಟ್ಟು ಹಾಕಲಾಯಿತು. ಈ ಘಟನೆ ಸ್ವಾತಂತ್ರ್ಯ ಹೋರಾಟಗಾರರ ರೋಷಾಗ್ನಿಯನ್ನು ಮತ್ತಷ್ಟು ಉದ್ದೀಪಿಸಿತ್ತು. ಅಲ್ಲಿ ಒಗ್ಗಟ್ಟಾದ ಐವತ್ತರಿಂದ ಅರವತ್ತು ಹೋರಾಟಗಾರರು ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತಾ, ಮಹಾತ್ಮ ಗಾಂಧಿಯನ್ನು ಶ್ಲಾಘಿಸುತ್ತಾ ಬ್ರಿಟಿಷರ ವಿರುದ್ಧ ಧಿಕ್ಕಾರ ಕೂಗುತ್ತಾ ನಾಥುವಖಾನ್ ನಗರದ ವರೆಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರಲ್ಲಿ  22 ಮಂದಿಯನ್ನು ಬಂಧಿಸಿ ಕರೆದೊಯ್ದರು. ಘಟನೆಗೆ ಕಾರಣೀಕರ್ತ ಎಂದು ಧನ್ ಸಿಂಗ್ ರನ್ನು ಜೈಲಿಗೆ ಅಟ್ಟಿ ಭಯಂಕರವಾಗಿ ಥಳಿಸಲಾಯಿತು ಮತ್ತು ಅವರನ್ನು ಎರಡು ಮಹಡಿಗಳ ಮೇಲಿನಿಂದ ಕೆಳಗೆ ನೂಕಲಾಯ್ತು. ಇದರಿಂದಾಗಿ ಅವರು ತೀವ್ರವಾಗಿ ಗಾಯಗೊಂಡರು.ಇದಾದ ನಂತರ ಅವರ ಪ್ರಕರಣ ನೈನಿತಾಲ್ ನ್ಯಾಯಾಲಯಕ್ಕೆ ಹೋಯಿತು. ನೈನಿತಾಲ್ ನ್ಯಾಯಾಧೀಶರು, ಈ ಘಟನೆಗೆ ಕಾರಣಕರ್ತರಾಗಿದ್ದಕ್ಕಾಗಿ, ಹಾಗೂ ಸ್ವಾತಂತ್ರ್ಯಕ್ಕೆ ಹೋರಾಡಿದ ತಪ್ಪಿಗಾಗಿ ಅವರಿಗೆ ಮೂರೂವರೆ ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!