ಲೋಕನಾಥ್ ಬಾಲ್ ನೇತೃತ್ವದಲ್ಲಿ ನಡೆದಿದ್ದ ಶಸ್ತ್ರಾಸ್ತ್ರ ದಂಗೆಗೆ ಬ್ರಿಟೀಷ್‌ ಸರ್ಕಾರ ಕಂಗಾಲಾಗಿತ್ತು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ವಿಶೇಷ)
ಪ್ರಾಣಕೃಷ್ಣ ಬಾಲ್ ಎಂಬುವವರ ಪುತ್ರ ಲೋಕನಾಥ್ ಬಾಲ್ (1907 -1964) ಚಿತ್ತಗಾಂಗ್ ಜಿಲ್ಲೆಯ ಧೋರ್ಲಾ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲೇ ಸ್ವಾತಂತ್ರ್ಯ ಹೋರಾಟದತ್ತ ಸೆಳೆಯಲ್ಪಟ್ಟ ಲೋಕನಾಥ್, 1930ರಲ್ಲಿ ಚಿತ್ತಗಾಂಗ್ ನಲ್ಲಿ ದಂಗೆ ನಡೆಸಿದ ಸ್ವಾತಂತ್ರ್ಯ ಹೋರಾಟಗಾರ ಸೂರ್ಯ ಸೇನ್ ರ ನಿಕಟವರ್ತಿಯಾಗಿ ಗುರುತಿಸಿಕೊಂಡರು.
1930 ಏಪ್ರಿಲ್ 18ರಂದು ಕ್ರಾಂತಿಕಾರಿಗಳನ್ನು ಒಗ್ಗೂಡಿಸಿದ ಸೂರ್ಯ ಸೇನ್ ಅವರನ್ನು ಸಣ್ಣ ಗುಂಪುಗಳಾಗಿ ವಿಭಜಿಸಿದರು. ಪ್ರತಿಯೊಂದು ಗುಂಪಿಗೂ ನಿರ್ದಿಷ್ಟ ಕರ್ತವ್ಯಗಳನ್ನು ವಹಿಸಿದ್ದರು. ಒಂದು ಗುಂಪು ಪೊಲೀಸ್ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವುದು, ಮತ್ತೊಂದು ಟೆಲಿಗ್ರಾಫ್ ಕಚೇರಿ, ರೈಲ್ವೆ ನಿಲ್ದಾಣ ಮತ್ತು ಯುರೋಪಿಯನ್ ಕ್ಲಬ್ ಮೇಲೆ ದಾಳಿ ನಡೆಸುವುದು ಹೀಗೆ ವಿವಿಧ ಜವಾಬ್ದಾರಿಯನ್ನು ವಹಿಸಲಾಗಿತ್ತು. ಈ ಗುಂಪುಗಳು ಏಕಕಾಲದಲ್ಲಿ ದಾಳಿ ಇಟ್ಟಾಗ ಬ್ರಿಟೀಷರು ಕಂಗೆಟ್ಟರು. ಹತ್ತು ಶಸ್ತ್ರಸಜ್ಜಿತ ಯುವಕರ ಗುಂಪಿನ ನಾಯಕತ್ವ ವಹಿಸಿದ್ದ ಲೋಕನಾಥ್,  ಬ್ರಿಟೀಷ್‌ ಪಡೆಗಳ ಶಸ್ತ್ರಾಗಾರದ ಮೇಲೆ ದಾಳಿ ನಡೆಸಿದರು. ಹೆಚ್ಚಿನ ವಿರೋಧವಿಲ್ಲದೆ ಸುಲಭವಾಗಿ ಅದನ್ನು ಆಕ್ರಮಿಸಿಕೊಂಡರು. ಇತರ ಗುಂಪುಗಳು ಸಹ ತಮ್ಮ ಕಾರ್ಯವನ್ನು ಅಚ್ಚುಗಟ್ಟಾಗಿ ನಿರ್ವಹಿಸಿದವು. ಈ ಗುಂಪಿನ ದಾಳಿಗೆ ಕಂಗೆಟ್ಟ ಬ್ರಿಟೀಷರು ಹೆದರಿ ಓಡಲಾರಂಭಿಸಿದರು.  ಚಿತ್ತಗಾಂಗ್‌ನಲ್ಲಿದ್ದ ಬ್ರಿಟೀಷ್‌ ಸರ್ಕಾರ ಮೂರು ದಿನಗಳವರೆಗೆ ಅಸ್ತಿತ್ವವನ್ನು ಕಳೆದುಕೊಂಡಿತ್ತು.
ಈ ದಂಗೆಯನ್ನು ಹತ್ತಿಕ್ಕಲು ಬ್ರಿಟೀಷರು ಅರೆಸೈನಿಕ ಪಡೆಗಳನ್ನು ಕಳುಹಿಸಿದರು. ಈ ಪಡೆಗಳ ದಾಳಿಗೆ  ಕ್ರಾಂತಿಕಾರಿಗಳು ಜಲಾಲಾಬಾದ್ ಬೆಟ್ಟಕ್ಕೆ ಹಿಮ್ಮೆಟ್ಟಿದರು. 1930 ರ ಏಪ್ರಿಲ್ 22 ರಂದು ಲೋಕನಾಥ್ ಬಾಲ್ ನೇತೃತ್ವದಲ್ಲಿ ಹೋರಾಟಗಾರರು  ಬ್ರಿಟಿಷ್ ಸಶಸ್ತ್ರ ಪಡೆಗಳೊಂದಿಗೆ ಹೋರಾಡಿದರು . ಈ ಕಕದನದಲ್ಲಿ ಬಾಲ್‌ರ ಕಿರಿಯ ಸಹೋದರ ಹರಿಗೋಪಾಲ್ (ಟೆಗ್ರಾ) ಸೇರಿದಂತೆ 10 ದೇಶಭಕ್ತರು ಬ್ರಿಟೀಷರ ಗುಂಡಿಗೆ ಬಲಿಯಾದರು. ಲೋಕನಾಥ್ ಸೇರಿದಂತೆ ಅವರ ಅನೇಕ ಪ್ರಮುಖ ನಾಯಕರು ಬೇರೆಡೆಗೆ ಪಲಾಯನ ಮಾಡಿದರು.
ದೇಶಭಕ್ತರ ಈ ದಂಗೆಯಿಂದ ಬ್ರಿಟೀಷರು ಸಾಕಷ್ಟು ಕ್ರೋಧಗೊಂಡಿದ್ದರು. ಕಲ್ಕತ್ತಾ ಪೋಲೀಸ್ ಕಮಿಷನರ್ ಚಾರ್ಲ್ಸ್ ಟೆಗಾರ್ಟ್  ದೊಡ್ಡ ಪಡೆಯೊಂದಿಗೆ ಈ ಸ್ವಾತಂತ್ರ್ಯ ಹೋರಾಟಗಾರರನ್ನು ಹಿಂಬಾಲಿಸಿದ. ಆದರೆ ಹೋರಾಟಗಾರರು ಫ್ರೆಂಚರಿಗೆ ಸೇರಿದ ದ್ವೀಪಸಮೂಹವಾದ ಚಂದನ್ನಗೋರ್‌ಗೆ ತಪ್ಪಿಸಿಕೊಂಡರು, ಆದರೂ ಬೆಂಬಿಡದ ಬ್ರಿಟೀಷರು ಹೋರಾಟಗಾರರನ್ನು ಗುಂಡಿಕ್ಕಿ ಕೊಂದು, ಲೋಕನಾಥ್ ಮತ್ತು ಇತರ ಇಬ್ಬರನ್ನು ಬಂಧಿಸಿದರು. ಬಳಿಕ ನಡೆದ ವಿಚಾರಣೆಯಲ್ಲಿ ಅವರೆಲ್ಲರಿಗೂ ಸೆಲ್ಯುಲಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 1946 ರಲ್ಲಿ ಬಿಡುಗಡೆಯಾದ ಬಳಿಕ ಲೋಕನಾಥ್ ಬಾಲ್ ಕಲ್ಕತ್ತಾ ಕಾರ್ಪೊರೇಶನ್‌ನಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!