Saturday, June 25, 2022

Latest Posts

ಸ್ವಾತಂತ್ರ್ಯ ಚಳವಳಿ- ಸಾಮಾಜಿಕ ಹೋರಾಟಕ್ಕೆ ಸುಭದ್ರಾ ಕೊಡುಗೆಗಳನ್ನು ತಿಳಿದರೆ ಹೆಮ್ಮೆಪಡುತ್ತೀರಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದ ಸ್ವಾತಂತ್ರ್ಯ ಚಳವಳಿ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಸುಭದ್ರಾ ಜೋಶಿ ಅವರದ್ದು ಅಪ್ರತಿಮ ಹೆಸರು. ಅಲ್ಪಸಂಖ್ಯಾತರು, ದುರ್ಬಲ ವರ್ಗಗಳು ಮತ್ತು ವಿಕಲಚೇತನರಿಗೆ ರಾಷ್ಟ್ರೀಯ ಏಕೀಕರಣ- ಕೋಮು ಸೌಹಾರ್ದತೆ ಬೆಳೆಸಲು ಹಾಗೂ ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ಆಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
ಗಾಂಧೀಜಿಯವರ ಆದರ್ಶಗಳಿಂದ ಆಕರ್ಷಿತಳಾಗಿದ್ದ ಆಕೆ ಲಾಹೋರ್‌ನಲ್ಲಿ ಓದುತ್ತಿದ್ದಾಗ ವಾರ್ಧಾದಲ್ಲಿರುವ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ್ದರು. ಆ ಬಳಿಕ ಭೂಗತರಾಗಿ ‘ಹಮಾರಾ ಸಂಗ್ರಾಮ್’ ಜರ್ನಲ್ ಅನ್ನು ಸಂಪಾದಿಸಿದರು. ದಲಿತ ಮಕ್ಕಳ ಶಿಕ್ಷಣಕ್ಕಾಗಿ ದೆಹಲಿಯಲ್ಲಿ ಸಂಜೆ ಶಾಲೆಗಳನ್ನು ತೆರೆದರು. ಚಳವಳಿಗಳಲ್ಲಿ ಭಾಗವಹಿಸಿದ್ದಕ್ಕೆ ಆಕೆಯನ್ನು ಬಂಧಿಸಿ ಲಾಹೋರ್ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು. ಜೈಲಿನಿಂದ ಬಿಡುಗಡೆಯಾದ ನಂತರ, ಆಕೆ ದೆಹಲಿಯಲ್ಲಿ ಕೈಗಾರಿಕಾ ಕಾರ್ಮಿಕರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 1946 ರಲ್ಲಿ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಾಗ ಕೋಮು ಸೌಹಾರ್ದತೆಯನ್ನು ಪುನಃಸ್ಥಾಪಿಸಲು ಆಕೆ ನಡೆಸಿದ ಪ್ರಯತ್ನಗಳು ಗಾಂಧೀಜಿ ಮತ್ತು ಜವಾಹರಲಾಲ್ ನೆಹರು ಅವರ ಗಮನ ಸೆಳೆದವು.
ಗಾಂಧೀಜಿ ದಿನನಿತ್ಯದ ಪರಿಸ್ಥಿತಿಯ ವರದಿಯನ್ನು ಕೇಳಿದರು. ಜವಾಹರಲಾಲ್ ನೆಹರು ಆಕೆಯ ಸಮರ್ಪಣೆಯನ್ನು ಶ್ಲಾಘಿಸಿದರು. ವಿಭಜನೆಯ ಕರಾಳ ದಿನಗಳಲ್ಲಿ, ಗಾಂಧೀಜಿಯವರ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಹರರಡಲು ಶಾಂತಿ ದಳ ಎಂಬ ಶಾಂತಿ ಸ್ವಯಂಸೇವಕ ಸಂಘಟನೆಯನ್ನು ಸ್ಥಾಪಿಸಿದರು. ಪಾಕಿಸ್ತಾನದಿಂದ ಸ್ಥಳಾಂತರಿಸಲ್ಪಟ್ಟವರಿಗೆ ಪುನರ್ವಸತಿ ಕಲ್ಪಿಸಿಕೊಟ್ಟರು.
ಸ್ವಾತಂತ್ರ್ಯಾ ನಂತರ ನಾಲ್ಕು ಅವಧಿಗೆ ಸಂಸದೆಯಾಗಿ ಆಯ್ಕೆಯಾದರು. ವಿಶೇಷ ವಿವಾಹ ಕಾಯಿದೆ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಅಲಿಗಢ ವಿಶ್ವವಿದ್ಯಾಲಯದ ತಿದ್ದುಪಡಿ ಕಾಯ್ದೆ ಮೊದಲಾದವುಗಳ ಅಂಗೀಕಾರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಅನ್ನು ತಿದ್ದುಪಡಿ ಮಾಡುವ ಪ್ರಕ್ರಿಯೆಯಲ್ಲಿ ಪ್ರವರ್ತಕರಾಗಿದ್ದರು. ಬಡವರ ಉನ್ನತಿಗಾಗಿ ನಿಯಂತ್ರಿತ ಬೆಲೆಯಲ್ಲಿ ಆಹಾರ-ಧಾನ್ಯ ವಿತರಣೆಗಾಗಿ ಸಹಕಾರ ಸಂಘ, ರಿಕ್ಷಾ ಎಳೆಯುವವರಿಗೆ ಸಂಘ, ಕಾಫಿ ಕಾರ್ಮಿಕರಿಗೆ ಸಹಕಾರಿ ಸಂಘ, ಮತ್ತು ಕಿವುಡ ಮತ್ತು ಮೂಕರ ಸಂಘ, ಮತ್ತು ದೆಹಲಿ ಮಹಿಳಾ ಸಮಾಜ ಮುಂತಾದ ಹತ್ತುಹಲವು ಯೋಜನೆಗಳನ್ನು ಪ್ರಾರಂಭಿಸಿದರು. ನಿರ್ಗತಿಕ ಮಹಿಳೆಯರಿಗೆ ಸಹಾಯಹಸ್ತ ಚಾಚಿದರು.
ದೇಶವಾಸಿಗಳು ಸೌಹಾರ್ದಯುತವಾಗಿ ಮತ್ತು ಸಹಬಾಳ್ವೆಯಿಂದ ಬಾಳಬೇಕು ಎಂಬುದು ಆಕೆಯ ಬಯಕೆಯಾಗಿತ್ತು. ಜಬಲ್ಪುರ, ಹೈದರಾಬಾದ್, ಅಹಮದಾಬಾದ್ ಮತ್ತು ಇತರೆಡೆಗಳಲ್ಲಿ ಗಲಭೆಗಳು ಭುಗಿಲೆದ್ದಾಗ ಮತ್ತು 1984 ರ ಸಮಯದಲ್ಲಿ ಅವರು ಈ ಎಲ್ಲಾ ಪ್ರಕ್ಷುಬ್ಧ ಪ್ರದೇಶಗಳಿಗೆ ಭೇಟಿ ನೀಡಿ ಶಾಂತಿ ಸ್ಥಾಪನೆಗೆ ಶ್ರಮಿಸಿದ್ದರು.
“ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸುಭದ್ರಾ ಬಗ್ಗೆ ಅಪಾರ ಮೆಚ್ಚುಗೆ ಮತ್ತು ಗೌರವವನ್ನು ಹೊಂದಿದ್ದರುʼ. ಸುಭದ್ರಾ ಜೋಶಿಯವರು 29 ಅಕ್ಟೋಬರ್ 2003 ರಂದು ನಿಧನರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss