ಯುಪಿ ಸಿಎಂ ಯೋಗಿ ಆದಿತ್ಯನಾಥ್ ಗೆ ಬಂದ ಕೊಲೆ ಬೆದರಿಕೆ ಹಿಂದೆ ಐಟಿ ಯುವತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆ ಮಾಡಲಾಗಿದ್ದು, ಈ ಹತ್ಯೆಯ ಆರೋಪವನ್ನು ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಹೊತ್ತುಕೊಂಡಿದೆ. ಆದರೆ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಕೊಲೆ ಬೆದರಿಕೆ ಬಂದಿದ್ದು, 10 ದಿನಗಳಲ್ಲಿ ರಾಜೀನಾಮೆ ಕೊಡದಿದ್ರೆ ಬಾಬಾ ಸಿದ್ದಿಕಿಗೆ ಆದ ಗತಿಯೇ ಆಗುತ್ತದೆ ಎಂದು ಬೆದರಿಕೆಯಲ್ಲಿ ತಿಳಿಸಲಾಗಿದೆ. ಶನಿವಾರ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಈ ಸಂದೇಶ ಬಂದಿತ್ತು. 10 ದಿನಗಳಲ್ಲಿ ರಾಜೀನಾಮೆ ಕೊಡದಿದ್ರೆ ಕೊಲೆ ಮಾಡುವುದಾಗಿ ಹೇಳಲಾಗಿತ್ತು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಪ್ರಚಾರಕ್ಕಾಗಿ ಯೋಗಿ ಆದಿತ್ಯನಾಥ್ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವಲ್ಲೇ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಿದ್ದರು. ಅಪರಿಚಿತ ಸಂಖ್ಯೆಯನ್ನು ಬೆನ್ನಟ್ಟಿ ಹೋದ ಪೊಲೀಸರ ಕೈಗೆ ಸಿಕ್ಕಿದ್ದು 24 ವರ್ಷದ ಯುವತಿ.

ಹೆಸರು ಫಾತಿಮಾ ಖಾನ್. ಈಕೆಯನ್ನು ಸದ್ಯ ಬಂಧಿಸಲಾಗಿದೆ. ಫಾತಿಮಾ ಮಹಾರಾಷ್ಟ್ರದ ನೆರೆಯ ಥಾಣೆ ಜಿಲ್ಲೆಯ ಉಲ್ಹಾಸ್‌ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾಳೆ. ಕುತೂಹಲದ ವಿಷಯ ಎಂದರೆ ಈಕೆ ಮಾಹಿತಿ ತಂತ್ರಜ್ಞಾನದಲ್ಲಿ (ಐಟಿ) ಬಿಎಸ್ಸಿ ಪದವಿ ಪಡೆದಿದ್ದಾಳೆ.

ಈಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಸದ್ಯದ ವರದಿಯ ಪ್ರಕಾರ, ಫಾತಿಮಾ ಖಾನ್​ ಮಾನಸಿಕ ಅಸ್ವಸ್ಥಳು ಎಂದು ಹೇಳಲಾಗುತ್ತಿದೆ. ಆದರೆ ಇದರ ಹಿಂದಿರುವ ಕೈವಾಡ ಏನು, ಏಕೆ ಕರೆ ಮಾಡಿದ್ದು ಎಂಬಿತ್ಯಾದಿಯ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ. ಬೆದರಿಕೆ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸದ್ಯದ ಸ್ಥಿತಿಯಲ್ಲಿ ಕೊಲೆ ಬೆದರಿಕೆ ಸಂದೇಶಗಳು ಮುಂಬೈ ಪೊಲೀಸರ ನಿದ್ದೆಗೆಡಿಸಿವೆ. ಕಳೆದ ಹಲವು ವಾರಗಳಿಂದ ಇಂಥ ಬೆದರಿಕೆ ಹೆಚ್ಚಾಗುತ್ತಿದೆ. ಇವರಲ್ಲಿ ಹೆಚ್ಚಿನವರು ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಸದ್ಯ ಯೋಗಿ ಅವರಿಗೆ ಬೆದರಿಕೆ ಹಾಕಿರುವ ಯುವತಿ ಮಾನಸಿಕ ಅಸ್ವಸ್ಥಳಂತೆ ಕಾಣಿಸಿಕೊಳ್ಳುತ್ತಿದ್ದರೂ, ಪ್ರಕರಣವನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!