ಅಹಹಾ ಎಂತಾ ಅಧಿಕಾರಿ… ಮಳೆ ಸುರಿಸದ ಇಂದ್ರನ ವಿರುದ್ಧವೇ ಕ್ರಮಕ್ಕೆ ಶಿಫಾರಸ್ಸು..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌  
ಸಕಾಲಿಕವಾಗಿ ಮಳೆ ಸುರಿಸದ ಇಂದ್ರನ ವಿರುದ್ಧವೇ ಕ್ರಮ ಕೈಗೊಳ್ಳುವಂತೆ ವಿಚಿತ್ರ ಶಿಫಾರಸು ಮಾಡುವ ಮೂಲಕ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಹಿರಿಯ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಸುದ್ದಿಗೆ ಗ್ರಾಸವಾಗಿದ್ದಾರೆ.
ಜಿಲ್ಲೆಯಲ್ಲಿ ಮಳೆ ಕೊರತೆಗೆ ಕಾರಣೀಕರ್ತನಾದ ʼಮಳೆದೇವತೆʼ ಭಗವಾನ್ ಇಂದ್ರನ ವಿರುದ್ಧ ಕ್ರಮಕ್ಕೆ ನಾನು ನಿಮಗೆ ಶಿಫಾರಸ್ಸು ಮಾಡುತ್ತೇನೆ ಎಂಬ ಒಕ್ಕಣೆಯಿದ್ದ ಪತ್ರವನ್ನು ಓದಿದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕಕ್ಕಾಬಿಕ್ಕಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ವಿಚಾರಿಸಿದಾಗ ಸಂಪೂರ್ಣ ಕಹಾನಿ ಹೊರಬಿದ್ದಿದೆ.
ಗೊಂಡಾ ಜಿಲ್ಲೆಯ ಝಾಲಾ ಗ್ರಾಮದ ಸುಮಿತ್ ಕುಮಾರ್ ಯಾದವ್ ಎಂಬ ರೈತನೊಬ್ಬ ʼಸಮಾಧಾನ ದಿವಸ್ʼ (ದೂರು) ಕಾರ್ಯಕ್ರಮದಲ್ಲಿ ಕಂದಾಯ ಅಧಿಕಾರಿ ಎನ್.ಎನ್.ವರ್ಮ ಅವರಿಗೆ ದೂರೊಂದನ್ನು ಸಲ್ಲಿಸಿದ್ದಾನೆ.
ʼಜಿಲ್ಲೆಯಲ್ಲಿ ಮಳೆ ಕೊರತೆಯಿಂದ ನಮಗೆಲ್ಲಾ ತೊಂದರೆ ಆಗಿದೆ. ಇದಕ್ಕೆಲ್ಲ ಮಳೆದೇವತೆಯಾದ ಇಂದ್ರ ಮಹಾಶಯನೇ ಕಾರಣ. ಆದ್ದರಿಂದ ಇಂದ್ರ ಭಗವಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಅಧಿಕಾರಿ ವರ್ಮಾ ಈ ಪತ್ರಕ್ಕೆ ಸಹಿಹಾಕಿ, “ಮಳೆ ದೇವರು” ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿ ಡಿಎಂಗೆ ರವಾನಿಸಿದ್ದಾರೆ. ಈ ಪತ್ರ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜನರಿಂದ ಭಾರೀ ತಮಾಷೆ ವ್ಯಕ್ತವಾಗುತ್ತಿದ್ದಂತೆ ʼಆ ಪತ್ರ ನಕಲಿ, ನಾನು ಅಂತಹ ಯಾವುದೇ ಪತ್ರವನ್ನು ಫಾರ್ವರ್ಡ್ ಮಾಡಿಲ್ಲʼ ಎಂದು ವರ್ಮಾ ಅಲವತ್ತುಗೊಂಡಿದ್ದಾರೆ. ಆದರೆ ಪತ್ರದಲ್ಲಿ ಅವರ ಸಹಿ ಇದೆ ಎಂದು ಮೂಲಗಳು ತಿಳಿಸಿವೆ.
ʼಸಮಾಧಾನ್ ದಿವಸ್ ಸಮಯದಲ್ಲಿ ಜನರಿಂದ ನೂರಾರು ದೂರುಗಳನ್ನು ಸ್ವೀಕರಿಸಲಾಗುತ್ತದೆ. ಕೆಲವೊಮ್ಮೆ, ಪತ್ರಗಳನ್ನು ಅವುಗಳ ವಿಷಯವನ್ನು ಪರಿಶೀಲಿಸದೆ ಮುಂದಿನ ಕ್ರಮಕ್ಕಾಗಿ ರವಾನಿಸಲಾಗುತ್ತದೆ,” ಎಂದು ಇನ್ನೊಬ್ಬ ಜಿಲ್ಲಾ ಅಧಿಕಾರಿ ಹೇಳಿದ್ದಾರೆ. ಪ್ರಕರಣದ ಈಗ ಮುಂದಿನ ಹಂತ ತಲುಪಿದ್ದು, ʼಇಂದ್ರʼನ ವಿರುದ್ಧ ಡಿಎಂ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ!.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!