Tuesday, March 28, 2023

Latest Posts

ಬರಲಿದೆ ಮೈಂಡ್‌ ಕಂಟ್ರೋಲ್ಡ್ ಕಂಪ್ಯೂಟರ್‌ ತಂತ್ರಜ್ಞಾನ: ಸಂಶೋಧನೆಯಲ್ಲಿ ತೊಡಗಿದೆ ಈ ಸಂಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನೀವು ಕೈಯಿಂದ ಏನೂ ಮಾಡದೇ ಕೇವಲ ತಲೆಯಲ್ಲಿ ಯೋಚಿಸಿಯೇ ನಿಯಂತ್ರಿಸಬಹುದಾದ ತಂತ್ರಜ್ಞಾನ ವ್ಯವಸ್ಥೆಯೊಂದು ಸೃಷ್ಟಿಯಾದರೆ ಹೇಗಿರಬಹುದು? ಅಮೆರಿಕ ಮೂಲದ ತಂತ್ರಜ್ಞಾನ ಕಂಪನಿಯೊಂದು ಇಂಥಹುದೇ ಸಂಶೋಧನೆಯಲ್ಲಿ ತೊಡಗಿದೆ. ಕೇವಲ ಯೋಚನಾ ಶಕ್ತಿಯಿಂದಲೇ ಕಾರ್ಯನಿರ್ವಹಿಸಬಹುದಾದ ತಂತ್ರಜ್ಞಾನ ವ್ಯವಸ್ಥೆಯ ಕುರಿತು ಈ ಸಂಸ್ಥೆ ಸಂಶೋಧನೆ ನಡೆಸುತ್ತಿದೆ.

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರಂತಹ ದಿಗ್ಗಜರ ಬೆಂಬಲ ಹೊಂದಿರುವ ಯುಎಸ್ ಮೂಲದ ಬ್ರೈನ್ ಇಂಟರ್ಫೇಸ್ ಸ್ಟಾರ್ಟ್ಅಪ್ ʼಸಿಂಕ್ರಾನ್ʼ ಎಂಬ ಸಂಸ್ಥೆ ಹೀಗೊಂದು ಸಂಶೋಧನೆ ನಡೆಸುತ್ತಿದೆ. ಮುಖ್ಯವಾಗಿ ಪಾರ್ಶ್ವವಾಯು ಪೀಡಿತರಂಥವರ ದೈನಂದಿನ ಜೀವನದಲ್ಲಿ ಈ ಆವಿಷ್ಕಾರ ಪರಿವರ್ತನೆ ತರಲಿದೆ ಎನ್ನಲಾಗಿದೆ.

ಲಭ್ಯವಿರೋ ಮಾಹಿತಿಯ ಪ್ರಕಾರ ಸಿಂಕ್ರಾನ್ ಸ್ವಿಚ್ ಅನ್ನು ರಕ್ತನಾಳಗಳ ಮೂಲಕ ಅಳವಡಿಸಲಾಗುತ್ತದೆ. ಇದು ರಕ್ತಪರಿಚಲನೆಯಲ್ಲಿನ ವ್ಯತ್ಯಾಸಗಳು ಮತ್ತು ಅದರಲ್ಲಿ ಅಳವಡಿಸಲಾಗಿರುವ ಸಂವೇದಕಗಳನ್ನು ಬಳಸಿಕೊಂಡು ಮೆದುಳಿನ ಸಂದೇಶವನ್ನು ಡೀಕೋಡ್‌ ಮಾಡುತ್ತದೆ. ಅವುಗಳ ಮೂಲಕ ಇದು ಬಾಹ್ಯ ಯಂತ್ರಗಳಿಗೆ ಆದೇಶವನ್ನು ರವಾನಿಸುತ್ತದೆ. ಆ ಮೂಲಕ ರೋಗಿಗಳು ತಮ್ಮ ಮನಸ್ಸನ್ನು ಮಾತ್ರ ಬಳಸಿಕೊಂಡು ತಂತ್ರಜ್ಞಾನವನ್ನು ನಿರ್ವಹಿಸಲು ಇದು ಸಹಾಯಕವಾಗಲಿದೆ. ಪ್ರಾಯೋಗಿಕವಾಗಿ ಯುಎಸ್ನಲ್ಲಿ ಮೂರು ಮತ್ತು ಆಸ್ಟ್ರೇಲಿಯಾದಲ್ಲಿ ನಾಲ್ಕು ರೋಗಿಗಳ ಮೇಲೆ ಪರೀಕ್ಷಿಸಲಾಗಿದೆ.

ಆದರೆ ಈ ತಂತ್ರಜ್ಞಾನವು ಪರೀಕ್ಷಾ ಹಂತದಲ್ಲಿದ್ದು ಸಂಪೂರ್ಣವಾಗಿ ಸಿದ್ಧಗೊಂಡ ಮೇಲೆ ತೀವ್ರವಾದ ಪಾರ್ಶ್ವವಾಯು ಅಥವಾ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ALS) ನಂತಹ ಖಾಯಿಲೆಗಳನ್ನು ಹೊಂದಿರುವ ರೋಗಿಗಳಿಗೆ ಟೈಪಿಂಗ್, ಸಂದೇಶ ಕಳುಹಿಸುವಿಕೆ ಅಥವಾ ಸಾಮಾಜಿಕ ಮಾಧ್ಯಮವನ್ನು ಪ್ರವೇಶಿಸುವ ಮೂಲಕ ಸ್ನೇಹಿತರು, ಕುಟುಂಬ ಮತ್ತು ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸಲೂ ಕೂಡ ಸಹಾಯಕವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!