ಮಂಗಳೂರಿನಲ್ಲಿ ‘ಮಕ್ಕಳ ಹಬ್ಬ’: ಛಲವೇ ಸಾಧನೆಗೆ ಬಲ ಅಂದ್ರು ಯುಪಿಎಸ್‌ಸಿ ಟಾಪರ್ ನಂದಿನಿ ಕೆ.ಆರ್.

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ. ಅದು ವೃತ್ತಿಪರ ಪರೀಕ್ಷೆ ಅಲ್ಲ. ಯುಪಿಎಸ್‌ಸಿ ಪರೀಕ್ಷೆ ಬರೆಯಲು ಮೊದಲು ಮಾನಸಿಕವಾಗಿ ಸಿದ್ಧಗೊಳ್ಳಬೇಕು. ತಾಳ್ಮೆಯಿಂದ, ಛಲ ಬಿಡದೇ ಶೇ.100 ಪ್ರಯತ್ನ ಮಾಡಿದರೆ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆ ಹೊಂದುವುದು ಸುಲಭ…
ಇದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ ಐಎಎಸ್ ಅಧಿಕಾರಿ ನಂದಿನಿ ಕೆ.ಆರ್. ಅವರ ಅನುಭವದ ಮಾತುಗಳು.

ಕೇಶವ ಸ್ಮೃತಿ ಸಂವರ್ಧನ ಸಮಿತಿ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುತ್ತಿರುವ ಕನ್ನಡ ಶಾಲಾ ಮಕ್ಕಳ ಹಬ್ಬದಲ್ಲಿ ಅವರು ಮಕ್ಕಳ ಜತೆ ಸಂವಾದ ನಡೆಸಿದರು. ನಾನು 10ನೇ ತರಗತಿಯಲ್ಲಿ ಇದ್ದಾಗಲೇ ಯುಪಿಎಸ್‌ಸಿ ಪರೀಕ್ಷೆ ಬರೆಯುವ ನಿರ್ಧಾರ ಮಾಡಿದ್ದೆ. ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಂಡಿದ್ದ ನಾನು ಬಳಿಕ ಇಂಜಿನಿಯರಿಂಗ್ ಕೋರ್ಸ್ ಪೂರೈಸಿದೆ. ಇಂಜಿನಿಯರ್ ಆಗಿ ಕೆಲಸ ಮಾಡುತ್ತಲೇ ಯುಪಿಎಸ್‌ಸಿಗೆ ಅಧ್ಯಯನ ನಡೆಸಿ, ಯಶಸ್ಸು ಗಳಿಸಿದೆ ಎಂದರು.

ಸಮಯವನ್ನು ನಮ್ಮ ಗುರಿಸಾಧನೆಗಾಗಿ ಗರಿಷ್ಠ ಪ್ರಮಾಣದಲ್ಲಿ ಉಪಯೋಗಿಸಿ, ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಿ. ಪ್ರತಿದಿನ ಪತ್ರಿಕೆಗಳನ್ನು ಓದಿ. ಟಿವಿಯಲ್ಲಿ ಸುದ್ದಿಗಳನ್ನು ನೋಡಿ. ಅವನ್ನು ವಿಶ್ಲೇಷಣೆ ನಡೆಸಿ. ಪತ್ರಿಕೆಗಳ ಸಂಪಾದಕೀಯಗಳನ್ನು ಓದಿ. ಯುಪಿಎಸ್‌ಸಿಯಲ್ಲಿ ಯಾವ ವಿಷಯ ತೆಗೆದುಕೊಳ್ಳಬೇಕು ಎಂಬುದನ್ನು ಮೊದಲೇ ನಿರ್ಧರಿಸಿ ಗಂಭೀರವಾಗಿ ಅಧ್ಯಯನ ನಡೆಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮಾನವಿಕ ವಿಷಯಗಳು ಪ್ರಮುಖವಾಗಿರುವ ಯುಪಿಎಸ್‌ಸಿ ಪರೀಕ್ಷೆಯನ್ನು ವಿಜ್ಞಾನ ಓದಿದವರೂ ಸುಲಭವಾಗಿ ಎದುರಿಸಬಹುದು. ಕಳೆದ 10 ವರ್ಷಗಳ ಅಂಕಿಅಂಶ ಗಮನಿಸಿದರೆ, ಶೇ.೭೦ರಷ್ಟು ಮಂದಿ ಇಂಜಿನಿಯರಿಂಗ್ ಓದಿದವರು, ಶೇ.20ರಷ್ಟು ಮಂದಿ ವೈದ್ಯರು, ಉಳಿದ ಶೇ.10ರಷ್ಟು ಮಂದಿ ಮಾನವಿಕ ಸಹಿತ ಇತರ ಪದವಿ ಪಡೆದವರು ಯುಪಿಎಸ್‌ಸಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗದಿದ್ದರೆ, ಎಲ್ಲಿ ತಪ್ಪಾಗಿದೆ ಎಂಬುದನ್ನು ವಿಶ್ಲೇಷಣೆ ನಡೆಸಿ, ಮುಂದಿನ ಪ್ರಯತ್ನ ಮಾಡಿ ಎಂದು ಮಕ್ಕಳನ್ನು ಹುರಿದುಂಬಿಸಿದರು. ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ರವಿಚಂದ್ರ ಪಿ.ಎಂ. ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!