ಅಮೆರಿಕದ ಕಾಟ್ಸಾ ಕಾಯಿದೆಯಿಂದ ಭಾರತಕ್ಕೆ ವಿನಾಯಿತಿ- ರಷ್ಯ ಜತೆಗಿನ ರಕ್ಷಣಾ ವಹಿವಾಟಿನ ಮೇಲಿದ್ದ ತೂಗುಗತ್ತಿ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ರಾಜಕೀಯದಲ್ಲಿ ಭಾರತದ ಶಕ್ತಿ ಬೆಳೆಯುತ್ತಿರುವುದು ಇಂದು ಮತ್ತೊಮ್ಮೆ ಸಾಬೀತಾಗಿದೆ. ಕಾಟ್ಸಾ (CAATSA) ಕಾಯಿದೆಯ ಪಟ್ಟಿಯಿಂದ ಭಾರತಕ್ಕೆ ವಿನಾಯಿತಿ ನೀಡುವ ಹೊಸ ಮಸೂದೆಗೆ ಅಮೆರಿಕ ಸಂಸತ್ತು ಅನುಮೋದನೆ ನೀಡಿದೆ. ಆ ಮೂಲಕ ರಷ್ಯಾದಿಂದ S-400 ಸೇರಿದಂತೆ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವ ಹಾದಿ ಭಾರತಕ್ಕೀಗ ಇನ್ನಷ್ಟು ಸುಗಮವಾಗಿ ಮಾರ್ಪಟ್ಟಿದೆ.

ಟ್ರಂಪ್‌ ಆಡಳಿತಾವಧಿಯಲ್ಲಿ ಅಂದರೆ 2018ರಲ್ಲಿ, ಭಾರತವು ರಷ್ಯಾದಿಂದ ಅತ್ಯಾಧುನಿಕ ಕ್ಷಿಪಣಿ ನಿರೋಧಕ ರಕ್ಷಣಾ ವ್ಯವಸ್ಥೆಯಾದ S-400 ರಕ್ಷಣಾ ವ್ಯವಸ್ಥೆಯ ಖರೀದಿಗೆ ಮುಂದಾಗಿತ್ತು. ಇದರ ವಿರುದ್ಧ ಗುಟುರು ಹಾಕಿದ್ದ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಖರೀದಿ ಒಪ್ಪಂದವನ್ನು ವಿರೋಧಿಸಿದ್ದರು. ಈ ಬೆದರಿಕೆಯ ಹೊರತಾಗಿಯೂ ಭಾರತವು S-400 ಕ್ಷಿಪಣಿ ನಿರೋಧಕ ವ್ಯವಸ್ಥೆಯ ಖರೀದಿಗೆ ಮುಂದಾಯಿತು. ಆದರೆ ಇದರ ಮೇಲೆ ಕಾಟ್ಸಾ ಕರಿನೆರಳು ಆವರಿಸಿಕೊಂಡಿತ್ತು. ಕಾಟ್ಸಾವನ್ನು ಬಳಸಿಕೊಂಡು ಯಾವಾಗ ಬೇಕಾದರೂ ಅಮೆರಿಕವು ಭಾರತದ ಮೇಲೆ ನಿರ್ಬಂಧ ವಿಧಿಸಬಹುದಾಗಿತ್ತು.

ಆದರೆ ಇಂದಿನ ಅಮೆರಿಕ ಸಂಸತ್ತಿನಲ್ಲಿ ನಡೆದ ಹೊಸ ತಿದ್ದುಪಡಿಯೊಂದು ಈ ಕಾಟ್ಸಾ ಕಾಯಿದೆಯಿಂದ ಭಾರತಕ್ಕೆ ವಿನಾಯಿತಿ ಘೋಷಿಸಿದೆ. ಇತರ ದೇಶಗಳಾದ ಇರಾನ್‌, ಉತ್ತರಕೊರಿಯಾ ಹಾಗೂ ರಷ್ಯಾದ ಮೇಲೆಯೂ ಈ ಕಾಟ್ಸಾ ನಿರ್ಬಂಧವನ್ನು ಹೇರಲಾಗಿದ್ದರೂ ಭಾರತಕ್ಕೆ ಮಾತ್ರ ವಿನಾಯಿತಿ ನೀಡಿರುವುದು ಇಲ್ಲಿ ಉಲ್ಲೇಖನೀಯ.

ಈ ಕುರಿತು ಅಮೆರಿಕ ಕಾಂಗ್ರೆಸ್‌ ಸದಸ್ಯ ಆರ್.ಓ ಖನ್ನಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು “ಚೀನಾದಿಂದ ಗಡಿಬೆದರಿಕೆ ಎದುರಿಸುತ್ತಿರುವ ಭಾರತದ ಪ್ರಜಾಪ್ರಭುತ್ವದೊಂದಿಗೆ ಅಮೆರಿಕ ನಿಲ್ಲಬೇಕಿದೆ. ಅಮೆರಿಕ ಕಾರ್ಯತಂತ್ರದ ಹಿತಾಸಕ್ತಿಯಲ್ಲಿ ಅಮೆರಿಕ-ಭಾರತದ ಪಾಲುದಾರಿಕೆ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ” ಎಂದಿದ್ದು ಈ ಬದಲಾವಣೆಯು ಯುಎಸ್-ಭಾರತ ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.

ಏನಿದು ಕಾಟ್ಸಾ (CAATSA) ಕಾಯಿದೆ ?
CAATSA ವು ರಷ್ಯಾದಿಂದ ಪ್ರಮುಖ ರಕ್ಷಣಾ ಯಂತ್ರಾಂಶವನ್ನು ಖರೀದಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು US ಆಡಳಿತಕ್ಕೆ ಅಧಿಕಾರ ನೀಡುವ ಕಠಿಣ ಕಾನೂನಾಗಿದೆ. ಅಮೆರಿಕದ ಎದುರಾಳಿಯೊಂದಿಗೆ ವ್ಯವಹರಿಸುವ ದೇಶಗಳ ಮೇಲೆ CAATSA ಅಡಿಯಲ್ಲಿ US ನಿರ್ಬಂಧಗಳನ್ನು ವಿಧಿಸುತ್ತದೆ.

ಇದರನ್ವಯ ರಷ್ಯಾದಿಂದ ಭಾರತವು S-400 ಕ್ಷಿಪಣಿನಿರೋಧಕ ವ್ಯವಸ್ಥೆಯನ್ನು ಖರೀದಿಸುತ್ತಿದೆ ಎಂದು ಭಾರತದ ಮೇಲೆ ಕಾಟ್ಸಾದ ಅನ್ವಯ ಬೆದರಿಕೆ ಹಾಕಲಾಗಿತ್ತು.   ಇದೀಗ  ಕಾಟ್ಸಾದಿಂದ ಭಾರತಕ್ಕೆ ವಿನಾಯಿತಿ ನೀಡಲಾಗಿದ್ದು  ಚೀನಾದಿಂದ ಬೆದರಿಕೆ ಎದುರಿಸುತ್ತಿರುವ ಭಾರತಕ್ಕೆ ಈ ಬೆಳವಣಿಗೆಯು ಮತ್ತಷ್ಟು ಬಲ ತುಂಬಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!