Tuesday, March 21, 2023

Latest Posts

ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನ: ತಡೆದ ಗಗನ ಸಖಿಗೆ ಇರಿದ ಭೂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಲಾಸ್ ಏಂಜಲೀಸ್‌ನಿಂದ ಬೋಸ್ಟನ್‌ಗೆ ಪ್ರಯಾಣಿಸುತ್ತಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ದ್ವಾರ ತೆರೆಯಲು ಪ್ರಯತ್ನ ಮಾಡಿದ್ದು, ಅದನ್ನು ತಡೆಯಲು ಹೋದ ಗಗನಸಖಿಯ ಕುತ್ತಿಗೆಗೆ ಇರಿಯಲು ಮುಂದಾಗಿರುವ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಲಿಯೋಮಿನ್‌ಸ್ಟರ್‌ನ ಟೊರೆಸ್(33) ಎಂಬಾತನನ್ನು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಅಮೆರಿಕ ನ್ಯಾಯಾಂಗ ಇಲಾಖೆಯು ತಿಳಿಸಿದೆ.

ಆರೋಪಿ ಫ್ರಾನ್ಸಿಸ್ಕೊ ಟೊರೆಸ್‌ ಅಪಾಯಕಾರಿ ಆಯುಧ ಬಳಸಿ ವಿಮಾನ ಸಿಬ್ಬಂದಿಯನ್ನು ಇರಿಯಲು ಯತ್ನಿಸಿರುತ್ತಾನೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ.

ಟೊರೆಸ್‌ನನ್ನು ಭಾನುವಾರ ಸಂಜೆ ಬೋಸ್ಟನ್ ಲೋಗನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಾರ್ಚ್ 9 ರಂದು ಪ್ರಕರಣ ವಿಚಾರಣೆ ನಡೆಯಲಿದ್ದು, ಅಲ್ಲಿವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಟೊರೆಸ್ ಲಾಸ್ ಏಂಜಲೀಸ್‌ನಿಂದ ಬೋಸ್ಟನ್‌ಗೆ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದನು. ಲ್ಯಾಂಡಿಂಗ್‌ಗೆ ಸುಮಾರು 45 ನಿಮಿಷಗಳ ಕಾಲ ಇರುವಾಗ ವಿಮಾನ ಸಿಬ್ಬಂದಿಗೆ ಕಾಕ್‌ಪಿಟ್‌ನಲ್ಲಿ ಎಚ್ಚರಿಕೆಯ ಶಬ್ದ ಕೇಳಿಸಿತು, ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಯಿತು. ಬಳಿಕ ಬಾಗಿಲಿನ ಲಾಕ್ ಹ್ಯಾಂಡಲ್ ತೆರೆಯಲು ಪ್ರಯತ್ನಿಸಿರುವುದನ್ನು ಗಗನಸಖಿ ಗಮನಿಸಿದರು.

ತಕ್ಷಣ ಈ ವಿಷಯವನ್ನು ಪೈಲೆಟ್‌ಗೆ ತಿಳಿಸಲಾಗಿದೆ. ಇದೇ ವೇಳೆ ಟೊರೆಸ್‌ ಈ ಕೃತ್ಯ ನಡೆಸಿರುವುದು ಗೊತ್ತಾಗಿ ವಿಮಾನ ಸಿಬ್ಬಂದಿ ಆತನನ್ನು ಪ್ರಶ್ನಿಸಿದ್ದಾರೆ. ಆಗ ಆತ ತನ್ನ ಬಳಿಯಿದ್ದ ಅಪಾಯಕಾರಿ ಸಾಧನದಿಂದ ಗಗನಸಖಿಗೆ ಇರಿಯಲು ಯತ್ನಿಸಿದ್ದಾನೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!