September 27, 2026
Sunday, September 27, 2026
spot_img

ಅರಬ್ಬಿ ಸಮುದ್ರದಲ್ಲಿ US ನೌಕಾಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್: ಓರ್ವ ಸಿಬ್ಬಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಜೊತೆಗಿನ ಉದ್ವಿಗ್ನತೆಯ ನಡುವೆಯೇ ಅರಬ್ಬಿ ಸಮುದ್ರದಲ್ಲಿ ಅಮೆರಿಕ ನೌಕಾಪಡೆಯ ‘MH-60S ಸೀ ಹಾಕ್’ ಯುದ್ಧ ಹೆಲಿಕಾಪ್ಟರ್ ತುರ್ತು ಪರಿಸ್ಥಿತಿಯಿಂದಾಗಿ ಕಡಲಿನ ಮೇಲೆ ಲ್ಯಾಂಡಿಂಗ್ ಆಗಿದೆ. ಮುಂಜಾನೆ 3:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿಗಳ ಪೈಕಿ ಮೂವರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಸದ್ಯ ನಾಪತ್ತೆಯಾಗಿರುವ ನಾಲ್ಕನೇ ಸಿಬ್ಬಂದಿಗಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಯುಎಸ್ಎಸ್ ಜಾರ್ಜ್ ಬುಷ್ ನೌಕೆಗೆ ಸೇರಿದ ಹೆಲಿಕಾಪ್ಟರ್

ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ದೈತ್ಯ ವಿಮಾನವಾಹಕ ಯುದ್ಧ ನೌಕೆ ‘ಯುಎಸ್ಎಸ್ ಜಾರ್ಜ್ ಎಚ್​​ಚ್‌ಡಬ್ಲ್ಯೂ ಬುಷ್’ಗೆ ಸೇರಿದ್ದಾಗಿದೆ. ರಕ್ಷಿಸಲ್ಪಟ್ಟ ಮೂವರು ಸಿಬ್ಬಂದಿಗಳು ಸದ್ಯ ಸುರಕ್ಷಿತವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾದ ಸೈನಿಕನಿಗಾಗಿ ನೌಕಾಪಡೆಯ ಹಡಗುಗಳು ಮತ್ತು ವಿಮಾನಗಳು ತೀವ್ರ ಹುಡುಕಾಟ ನಡೆಸುತ್ತಿವೆ.

ಶತ್ರುಗಳ ದಾಳಿಯಲ್ಲ: ಅಮೆರಿಕ ಸ್ಪಷ್ಟನೆ

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ಇರುವುದರಿಂದ, ಈ ಹೆಲಿಕಾಪ್ಟರ್ ಮೇಲೆ ಶತ್ರು ದೇಶಗಳು ದಾಳಿ ಮಾಡಿವೆಯೇ ಎಂಬ ಅನುಮಾನ ಮೂಡಿತ್ತು. ಆದರೆ, ಈ ತುರ್ತು ಭೂಸ್ಪರ್ಶಕ್ಕೆ ಯಾವುದೇ ಬಾಹ್ಯ ದಾಳಿ ಅಥವಾ ‘ಪ್ರತಿಕೂಲ ಕ್ರಮ’ ಕಾರಣವಲ್ಲ ಎಂದು ಯುಎಸ್ ನೌಕಾಪಡೆ ಸ್ಪಷ್ಟಪಡಿಸಿದೆ. ತಾಂತ್ರಿಕ ದೋಷದ ಕುರಿತು ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.

ಕಡಲ ಭದ್ರತೆಗೆ ನಿಯೋಜನೆಗೊಂಡಿದ್ದ ಪಡೆ

ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಕಡಲ ಭದ್ರತೆಗಾಗಿ ಮಾರ್ಚ್ 31 ರಂದು ಅಮೆರಿಕದಿಂದ ಹೊರಟಿದ್ದ ‘ಯುಎಸ್ಎಸ್ ಜಾರ್ಜ್ ಬುಷ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್’, ಏಪ್ರಿಲ್ 23 ರಂದು ಮಧ್ಯಪ್ರಾಚ್ಯದ ಸಮುದ್ರ ವಲಯವನ್ನು ಪ್ರವೇಶಿಸಿತ್ತು. ಸದ್ಯ ಈ ವಲಯದಲ್ಲಿ ಅಮೆರಿಕ ಹಡಗುಗಳ ಸುರಕ್ಷತೆಯ ಜವಾಬ್ದಾರಿಯನ್ನು ಈ ಪಡೆ ಹೊತ್ತಿದೆ.

Must Read