ಅಮೆರಿಕ ರಷ್ಯಾ ನಡುವೆ ಖೈದಿಗಳ ವಿನಿಮಯ: ಶಸ್ತ್ರಾಸ್ತ್ರ ವ್ಯಾಪಾರಿಯ ಬದಲಿಗೆ ಬಾಸ್ಕೆಟ್‌ ಬಾಲ್‌ ತಾರೆ ತವರಿಗೆ ವಾಪಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉಕ್ರೇನ್‌ ಯುದ್ಧದ ವಿಷಯದಲ್ಲಿ ರಷ್ಯಾದೊಂದಿಗೆ ನೇರವಾಗಿ ಜಗಳಕ್ಕಿಳಿದಿರುವ ಅಮೆರಿಕ ಈಗ ಅದೇ ರಷ್ಯಾದೊಂದಿಗೆ ಖೈದಿಗಳ ವಿನಿಮಯ ಮಾಡಿಕೊಂಡಿದೆ. ರಷ್ಯಾದಲ್ಲಿ ತಿಂಗಳುಗಳ ಹಿಂದೆ ಬಂಧಿತವಾಗಿದ್ದ ಅಮೆರಿಕದ ಬಾಸ್ಕೆಟ್‌ ಬಾಲ್‌ ತಾರೆ ಬ್ರಿಟ್ನಿ ಗ್ರೈನರ್ ಅವರನ್ನು ತವರಿಗೆ ವಾಪಸ್‌ ಕರೆದುಕೊಂಡು ಬರಲಾಗಿದೆ. ಇದಕ್ಕೆ ಬದಲಾಗಿ ಅಮೆರಿಕವೂ ಕೂಡ ತನ್ನ ಬಂಧನದಲ್ಲಿದ್ದ ಶಸ್ತ್ರಾಸ್ತ್ರ ವ್ಯಾಪಾರಿ ವಿಕ್ಟರ್ ಬೌಟ್‌ ಎಂಬಾತನನ್ನು ರಷ್ಯಾಗೆ ಹಿಂತಿರುಗಿಸಿದೆ.

ಶೀತಲ ಸಮರದ ಕಾಲದಿಂದಲೂ ಅಮೆರಿಕ ಮತ್ತು ರಷ್ಯಾದ ನಡುವೆ ಸಂಬಂಧಗಳು ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ, ಅದರಲ್ಲೂ ಫೆಬ್ರವರಿಯಲ್ಲಿ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿತ್ತು. ಇವುಗಳ ನಡುವೆಯೇ ತಿಂಗಳುಗಳ ಕಾಲ ರಾಜತಾಂತ್ರಿಕರ ನಡುವೆ ಮಾತುಕತೆಗಳು ನಡೆದಿದ್ದವು. ಕೊನೆಗೂ ಅಮೆರಿಕವು ತನ್ನ ದೇಶದ ಬಾಸ್ಕೆಟ್‌ ಬಾಲ್‌ ತಾರೆಯನ್ನು ವಾಪಸ್‌ ಕರೆಸಿಕೊಳ್ಳುವಲ್ಲಿ ಸಫಲವಾಗಿದೆ. ಅಮೆರಿಕದಲ್ಲಿ ಬಂಧಿತನಾಗಿದ್ದ ಶಸ್ತ್ರಾಸ್ತ್ರ ವ್ಯಾಪಾರಿ ವಿಕ್ಟರ್‌ ಬೌಟ್‌ ಬದಲಾಗಿ ಈ ವಿನಿಮಯ ನಡೆದಿದೆ.

ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತೆಯಾಗಿರುವ ಮತ್ತು ಮಹಿಳಾ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ ಫೀನಿಕ್ಸ್ ಮರ್ಕ್ಯುರಿಯ ತಾರೆಯಾಗಿರುವ 32 ವರ್ಷದ ಬ್ರಿಟ್ನಿ ಗ್ರಿನರ್, ಫೆಬ್ರವರಿ 17 ರಂದು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದರು. ರಷ್ಯಾದಲ್ಲಿ ನಿಷೇಧಿತ ಗಾಂಜಾ ಎಣ್ಣೆಯನ್ನು ಹೊಂದಿರುವ ವೇಪ್ ಕಾರ್ಟ್ರಿಡ್ಜ್‌ಗಳು ಅವರ ಲಗೇಜ್‌ನಲ್ಲಿ ಪತ್ತೆಯಾದ ಕಾರಣ ಅವರನ್ನು ಬಂಧಿಸಲಾಯಿತು. . ಆಕೆಗೆ ಆಗಸ್ಟ್ 4 ರಂದು ಒಂಬತ್ತು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು.

55 ವರ್ಷದ ವಿಕ್ಟರ್‌ ಬೌಟ್‌ ರಷ್ಯಾದ ಪ್ರಜೆಯಾಗಿದ್ದು ಅಕ್ರಮ ಶಸ್ತ್ರಾಸ್ತ್ರ ಮಾರಾಟಕ್ಕೆ ಸಂಬಂಧಿಸಿದಂತೆ 2012 ರಲ್ಲಿ ಯುಎಸ್ ನ್ಯಾಯಾಲಯವು ಆತನಿಗೆ 25 ವರ್ಷಗಳ ಜೈಲು ಶಿಕ್ಷೆಯನ್ನು ನೀಡಿತ್ತು. ಸುಮಾರು ಎರಡು ದಶಕಗಳ ಕಾಲ, ಬೌಟ್ ವಿಶ್ವದ ಅತ್ಯಂತ ಕುಖ್ಯಾತ ಶಸ್ತ್ರಾಸ್ತ್ರ ವ್ಯಾಪಾರಿಯಾಗಿದ್ದು, ಆಫ್ರಿಕಾ, ಏಷ್ಯಾ ಮತ್ತು ದಕ್ಷಿಣ ಅಮೆರಿಕಾದಲ್ಲಿನ ಬಂಡಾಯ ಗುಂಪುಗಳು ಮತ್ತು ಸೇನಾಧಿಕಾರಿಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಪ್ರಸ್ತುತ ತಿಂಗಳುಗಳ ಕಾಲ ಮಾತುಕತೆಯ ನಂತರ ರಷ್ಯಾವು ವಿಕ್ಟರ್‌ ಬೌಟ್‌ ನ ಬದಲಾಗಿ ಅಮೆರಿಕದ ಬಾಸ್ಕೆಟ್‌ ಬಾಲ್‌ ತಾರೆ ಬ್ರಿಟ್ನಿ ಅವರನ್ನು ತವರಿಗೆ ವಾಪಸ್‌ ಕಳಿಸಿದೆ ಎಂದು ಅಂತರಾಷ್ಟ್ರೀಯ ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!