ಕರಿಮೆಣಸು ಕೊಯ್ಲಿಗೆ ಅಲ್ಯೂಮಿನಿಯಂ ಏಣಿ ಬಳಕೆ: ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ದುರ್ಮರಣ

ಹೊಸದಿಗಂತ , ಮಡಿಕೇರಿ:

ಕಾಳುಮೆಣಸು ಕುಯ್ಲಿಗೆ ಬಳಸಿದ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ಸಾವಿಗೀಡಾದ ಘಟನೆ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೈಸೂರು ಜಿಲ್ಲೆಯ ಪಂಚವಳ್ಳಿ ಗ್ರಾಮದ ಪುಷ್ಪಗಿರಿ ಎಂಬವರೇ ಮೃತಪಟ್ಟ ವ್ಯಕ್ತಿ. ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮದ ಮದ್ರೀರ ಕರುಂಬಯ್ಯ(ಕಂಬ) ಎಂಬವರಿಗೆ ಸೇರಿದ ತೋಟದಲ್ಲಿ ಕರಿಮೆಣಸು ಕೊಯ್ಲಿಗೆ ಬಂದಿದ್ದ ಪುಷ್ಪಗಿರಿ, ಅಲ್ಯುಮಿನಿಯಂ ಏಣಿಯನ್ನು ಮರಕ್ಕೆ ಇಡುವಾಗ ಪಕ್ಕದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ತಗುಲಿದ್ದು, ಈ ಸಂದರ್ಭ ವಿದ್ಯುತ್ ಪ್ರವಹಿಸಿ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಬಹುತೇಕ ವಿದ್ಯುತ್ ಲೈನ್’ಗಳು ಕಾಫಿ ತೋಟಗಳ ನಡುವೆ ಹಾದು ಹೋಗಿದ್ದು, ತೋಟದ ಕೆಲಸದ ಸಂದರ್ಭ ಅಲ್ಯುಮಿನಿಯಂ‌ ಏಣಿಗೆ ಬದಲಾಗಿ ಮರ, ಫೈಬರ್ ಅಥವಾ ಬಿದಿರಿನ ಏಣಿಯನ್ನು ಬಳಸುವಂತೆ ಸೆಸ್ಕ್ ಅಧಿಕಾರಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ.

ಆದರೆ ಇದಕ್ಕೆ ಕಿವಿಗೊಡದೆ ಕೊಡಗಿನ ಕೆಲವೆಡೆ ಇನ್ನೂ ಕೂಡಾ ಅಲ್ಯೂಮಿನಿಯಂ ಏಣಿಯ ಬಳಕೆ ಮುಂದುವರೆದಿದೆ. ಹೀಗಾಗಿ ಕಳೆದ ಕೆಲವು ವರ್ಷಗಳಲ್ಲಿ ವಿದ್ಯುತ್ ಹರಿದು ಅನೇಕ ಮಂದಿ ಕಾರ್ಮಿಕರು ಅಸು ನೀಗಿರುವ ನಿದರ್ಶನಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here