ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗಳನ್ನು ಪ್ರಸಾದವಾಗಿ ವಿತರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಮತ್ತು ತಾಳೆ ಎಣ್ಣೆಯನ್ನು ಬಳಸಲಾಗುತ್ತಿತ್ತು ಎನ್ನುವುದು ದೃಢವಾಗಿದೆ. ಲ್ಯಾಬ್ ರಿಪೋರ್ಟ್‌ನಲ್ಲೂ ಈ ಅಂಶ ಪತ್ತೆಯಾಗಿದೆ .
ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ತಿರುಪತಿಯ ಭಕ್ತರ ನಂಬಿಕೆಗೆ ಚಂದ್ರಬಾಬು ನಾಯ್ಡು ಅವರ ಹೇಳಿಕೆ ಧಕ್ಕೆ ತಂದಿದೆ ಎಂದು ಟಿಟಿಡಿ ಅಧಿಕಾರಿಗಳು ವಾದಿಸಿದ್ದರು.
ಟಿಟಿಡಿ ಮಾಜಿ ಮುಖ್ಯಸ್ಥರು ಚಂದ್ರಬಾಬು ನಾಯ್ಡು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದರು. ಆದರೆ, ಚಂದ್ರಬಾಬು ನಾಯ್ಡು ಅವರ ಆರೋಪ ಸತ್ಯ ಎಂಬುದು ಇದೀಗ ಬಂದಿರುವ ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.
ಈ ಬಗ್ಗೆ ಟಿಡಿಪಿ ನಾಯಕ ಆನಂ ವೆಂಕಟ ರಮಣ ರೆಡ್ಡಿ ಅವರು ತುಪ್ಪವನ್ನು ಪರೀಕ್ಷಿಸಿದ ವಿವಿಧ ಪ್ರಯೋಗಾಲಯಗಳ ವರದಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನಕ್ಕೆ ಪೂರೈಕೆಯಾಗುವ ತುಪ್ಪವನ್ನು ದೇಶದಲ್ಲೇ ಪ್ರಸಿದ್ಧವಾಗಿರುವ ಎನ್‌ಡಿಡಿಬಿ ಕ್ಯಾಲ್ಫ್ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗಿದೆ. ಸೋಯಾಬೀನ್, ಕುಸುಬೆ, ಆಲಿವ್, ಗೋಧಿ ಹುರುಳಿ,, ಹತ್ತಿ ಬೀಜಗಳು, ಮೀನಿನ ಎಣ್ಣೆ, ಬೀಫ್ , ತಾಳೆ ಎಣ್ಣೆ ಮತ್ತು ಹಂದಿ ಕೊಬ್ಬನ್ನು ಸಹ ಈ ತುಪ್ಪದಲ್ಲಿ ಬಳಸಲಾಗಿದೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಗುತ್ತಿಗೆದಾರರು ಪೂರೈಸಿದ ತುಪ್ಪದಲ್ಲಿ ಶೇ.19ರಷ್ಟು ಮಾತ್ರ ತುಪ್ಪ ಇರುವುದು ಪತ್ತೆಯಾಗಿದೆ.
ಲಡ್ಡುವನ್ನು ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿತರಿಸಲಾಗುತ್ತದೆ. ಈ ದೇವಸ್ಥಾನವನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ನಡೆಸುತ್ತದೆ.
https://x.com/JaiTDP/status/1836737412447277307
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬುಧವಾರ ಆರೋಪಿಸಿದ್ದರು. ಆದರೆ, ವೈಎಸ್‌ಆರ್‌ಸಿಪಿ ಈ ಆರೋಪವನ್ನು ತಳ್ಳಿ ಹಾಕಿತ್ತು.