ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಎಲ್ಲ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನದಲ್ಲಿ ಪ್ರಸಾದಕ್ಕೆ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ತುಪ್ಪವನ್ನೇ ಬಳಸುವಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಪತ್ತೆಯಾದ ಬೆನ್ನಲ್ಲಿಯೇ ಇತರೆ ಖಾಸಗಿ ಕಂಪನಿಗಳ ಕಡಿಮೆ ದರದ ತುಪ್ಪಗಳನ್ನು ಬಳಸದಂತೆ ನಿಗಾವಹಿಸಲು ಮುಂದಾಗಿದೆ.
ಗುಣಮಟ್ಟದಲ್ಲಿ ನಂದಿನಿ ತುಪ್ಪ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಹೀಗಾಗಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಸ್ಥಾನಗಳಿಗೂ ಸರ್ಕಾರ ಮಹತ್ವದ ಆದೇಶ ನೀಡಿದೆ. ದೇವಾಲಯದ ಸೇವೆಗಳಿಗೆ, ದೀಪಗಳಿಗೆ ಮತ್ತು ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪವನ್ನೇ ಬಳಸಬೇಕು. ಜೊತೆಗೆ ದೇವಾಲಯಗಳಲ್ಲಿ ತಯಾರಿಸುವ ಪ್ರಸಾದದ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಮಹತ್ವದ ಸೂಚನೆ ನೀಡಲಾಗಿದೆ.
ರಾಜ್ಯದ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಆಂಧ್ರದ ತಿರುಮಲ ತಿರುಪತಿ ದೇವಾಲಯದಲ್ಲಿ ಲಡ್ಡುಗೆ ಪ್ರಾಣಿ ಕೊಬ್ಬು ಬಳಕೆಯ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕದ ಎಲ್ಲ ಪ್ರಮುಖ ದೇವಾಲಯಗಳಲ್ಲಿ ಪ್ರಸಾದ ಪರೀಕ್ಷಿಸಲು ರಾಜ್ಯ ಸರ್ಕಾರದ ನಿರ್ಧಾರ ಮಾಡಿದೆ.