ಮಳೆ ಹಾನಿ ಪರಿಹಾರ ಕಾಮಗಾರಿ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ: ಬಿಜೆಪಿ ಆರೋಪ

ಹೊಸದಿಗಂತ ವರದಿ ಕುಶಾಲನಗರ:

ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಸೇತುವೆಗಳು, ಸರಕಾರಿ ಕಟ್ಟಡಗಳ ಕಾಮಗಾರಿಗಳನ್ನು ನಡೆಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿ, ಪ್ರಕೃತಿ ವಿಕೋಪ ನಿಧಿಯಡಿ ಕೊಡಗು ಜಿಲ್ಲೆಗೆ ನೀಡಿದ ಅನುದಾನಗಳನ್ನು ಬೇರೆ ಕಾಮಗಾರಿಗಳಿಗೆ ಬದಲಾವಣೆ ಮಾಡಿರುವ ಸರಕಾರದ ನಿಲುವಿಗೆ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿ.ಕೆ.ಲೋಕೇಶ್, ನೂತನ ಸರ್ಕಾರದಿಂದ ಜಿಲ್ಲೆಗೆ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗಿಲ್ಲ. ಆದರೆ ಮಾಜಿ ಶಾಸಕರ ಅವಧಿಯಲ್ಲಿ ಏಳು ಕೋಟಿ ರೂ. ಅನುದಾನದಲ್ಲಿ ಅನುಷ್ಠಾನಗೊಳ್ಳಬೇಕಾಗಿದ್ದ ಕಾಮಗಾರಿಗಳನ್ನು ನೂತನ ಶಾಸಕರು ತಮ್ಮಿಷ್ಟದಂತೆ ಬದಲಾಯಿಸಿದ್ದಾರೆ ಎಂದು ಆರೋಪಿಸಿದರು.

ಹಾಲಿ ಶಾಸಕ ಮಂಥರ್ ಗೌಡ ತಮ್ಮ ಅವಧಿಯಲ್ಲಿ ಯಾವುದೇ ರೀತಿಯ ಹೆಚ್ಚುವರಿ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಕುಶಾಲನಗರ ವ್ಯಾಪ್ತಿಯಲ್ಲಿ ಶಾಸಕರ ಕೆಲಸ ಕಾರ್ಯಗಳನ್ನು ಪಕ್ಷದ‌ ಕೆಲವರು ಮಾಡುತ್ತಿದ್ದು, ಶಾಸಕರು ಯಾರು ಎನ್ನುವ ಪ್ರಶ್ನೆ ಉದ್ಭವವಾಗಿದೆ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಮೃತ್ ರಾಜ್ ಮಾತನಾಡಿ, ಜನರನ್ನು ಸೋಮಾರಿ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯ ಯೋಜನೆಗಳನ್ನು ರೂಪಿಸುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಸೇಡಿನ ರಾಜಕಾರಣ ಸಲ್ಲದು. ಇದೇ ರೀತಿ ಮುಂದುವರಿದಲ್ಲಿ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಕುಶಾಲನಗರದಲ್ಲಿ ಕಳ್ಳರಿಗೆ, ಅಪರಾಧ ಲೋಕದ ಜನರಿಗೆ ಪೊಲೀಸ್ ಇಲಾಖೆಯ ಭಯ ಇಲ್ಲದಂತೆ ಕಾಣುತ್ತಿದೆ. ಕುಶಾಲನಗರದಲ್ಲಿ ಆಗಾಗ್ಗೆ ಅಪರಾಧಗಳು ಮರುಕಳಿಸುತ್ತಿವೆ. ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!