ನೀರನ್ನು ಮಿತವಾಗಿ ಬಳಸಿ, ದಿನಕ್ಕೆ ಒಮ್ಮೆ ಮಾತ್ರ ಸ್ನಾನ ಮಾಡಿ: ಟೀಮ್‌ ಇಂಡಿಯಾಗೆ ಬಿಸಿಸಿಐ ಸೂಚನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಟೀಮ್‌ ಇಂಡಿಯಾ ಕ್ರಿಕೆಟ್‌ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಎಲ್ಲಾ ಪಂದ್ಯಗಳು ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿಯೇ ನಡೆಯಲಿದೆ. ಇದಕ್ಕಾಗಿ ಟೀಮ್‌ ಇಂಡಿಯಾ ಈಗಾಗಲೇ ಹರಾರೆ ತಲುಪಿದೆ. ಇದೀಗ ಹರಾರೆ ತಲುಪಿದ ಬೆನ್ನಲ್ಲಿಯೇ ಟೀಮ್‌ ಇಂಡಿಯಾಗೆ ಅಲ್ಲಿನ ಪರಿಸ್ಥಿತಿ ಅರಿವಾಗಿದ್ದು, ಬಿಸಿಸಿಐ ಕೂಡ ಅಲ್ಲಿನ ಸಮಸ್ಯೆಯ ಕುರಿತಾಗಿ ಕಟ್ಟುನಿಟ್ಟಿನ ಸೂಚನೆಯನ್ನು ರವಾನಿಸಿದೆ.

ಅದೇನೆಂದರೆ , ಜಿಂಬಾಬ್ವೆಯ ಹರಾರೆಯಲ್ಲಿ ಸ್ನಾನ ಮಾಡೋಕೆ ಕೂಡ ನೀರಿಲ್ಲ. ಹರಾರೆ ಸೇರಿದಂತೆ ಜಿಂಬಾಬ್ವೆಯ ಪ್ರಮುಖ ನಗರಗಳಲ್ಲಿ ನೀರಿನ ಸಮಸ್ಯೆ ಅತೀವವಾಗಿ ಕಾಡುತ್ತಿದೆ. ಈ ಕುರಿತಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರಿಗೆ ಜಿಂಬಾಬ್ವೆ ನೆಲದಲ್ಲಿ ನೀರನ್ನು ಮಿತವಾಗಿ ಬಳಸುವಂತೆ ಸೂಚನೆಯನ್ನು ರವಾನಿಸಿದೆ. ಯಾವುದೇ ಕಾರಣಕ್ಕೂ ಅತಿಯಾಗಿ ನೀರನ್ನು ಬಳಕೆ ಮಾಡಬೇಡಿ. ನೀರು ಪೋಲು ಮಾಡುವ ಕೆಲಸಕ್ಕೆ ಹೋಗಬೇಡಿ. ಸಾಧ್ಯವಾದಲ್ಲಿ, ದಿನಕ್ಕೆ ಒಮ್ಮೆ ಮಾತ್ರವೇ ಸ್ನಾನ ಮಾಡಿ. ಆಗಲೂ ಕೂಡ ಆದಷ್ಟು ಕಡಿಮೆ ನೀರನ್ನು ಬಳಸಿ ಎಂದು ಹೇಳಿದೆ.

ಟೀಮ್‌ ಮ್ಯಾನೇಜರ್‌ ಮೂಲಕ ಬಿಸಿಸಿಐ, ನೀರನ್ನು ಮಿತವಾಗಿ ಬಳಕೆ ಮಾಡಿ ಎನ್ನುವ ಸೂಚನೆಯನ್ನೂ ನೀಡಿದೆ. ಇದರೊಂದಿಗೆ ಇನ್ನೂ ಹಲವಾರು ನಿಯಮವನ್ನು ಬಿಸಿಸಿಐ ಆಟಗಾರರ ಮೇಲೆ ಹೇರಿದೆ. ಜಿಂಬಾಬ್ವೆಯಲ್ಲಿ ಸದ್ಯ ಪ್ರತಿ ದಿನ ಅಂದಾಜು 30 ಡಿಗ್ರಿ ತಾಪಮಾನವಿದ್ದು, ಆಟಗಾರರು ಮೈದಾನಕ್ಕೆ ಅಭ್ಯಾಸ ನಡೆಸಲು ಇದು ಸಮಸ್ಯೆ ಒಡ್ಡಿದೆ.

ಜಿಂಬಾಬ್ವೆಯ ಮಹಿಳಾ ರಾಜಕಾರಣಿ ಲಿಂಡಾ ತ್ಸುಂಗಿರೈ ಮಸಾರಿರಾ ಕೂಡ ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ನೀರಿನ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ‘ವಿಶೇಷವಾಗಿ ಪಶ್ಚಿಮ ಹರಾರೆ ಸೇರಿದಂತೆ ರಾಜಧಾನಿಯ ಉಳಿದ ಭಾಗಗಳಲ್ಲಿ ಸುಮಾರು ಮೂರು ವಾರಗಳಿಂದ ನೀರು ಸರಬರಾಜು ಇಲ್ಲ. ನೀರೇ ಜೀವನ, ಅದರ ಅನುಪಸ್ಥಿತಿಯಿಂದಾಗಿ ಜನರ ಆರೋಗ್ಯ ಮತ್ತು ಸ್ವಚ್ಛತೆಗೆ ದೊಡ್ಡ ಅಪಾಯವಿದೆ. ಸ್ಥಳೀಯಾಡಳಿತ ಇಲಾಖೆಗಳು ಹಾಗೂ ಹರಾರೆ ಆಡಳಿತ ಜನರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ಬಿಡಬೇಕು. ಅಲ್ಲದೆ, ಆದಷ್ಟು ಬೇಗ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಬರೆದಿದ್ದಾರೆ.

ನಾಳೆಯಿಂದ ಏಕದಿನ ಸರಣಿ:
ಹರಾರೆ ಪಶ್ಚಿಮ ಮತ್ತು ಹರಾರೆಯ ಇತರ ಭಾಗಗಳಲ್ಲಿ ಕಳೆದ 3 ವಾರಗಳಿಂದ ನೀರಿನ ಪೂರೈಕೆಯಾಗಿಲ್ಲ.. ಇದು ಸುರಕ್ಷಿತ, ಶುದ್ಧ ಮತ್ತು ಕುಡಿಯುವ ನೀರಿನ ಹಕ್ಕನ್ನು ಪ್ರತಿಪಾದಿಸುವ ಜಿಂಬಾಬ್ವೆ ಸಂವಿಧಾನದ ಸೆಕ್ಷನ್ 77 ರ ಸ್ಪಷ್ಟ ಉಲ್ಲಂಘನೆಯಾಗಿದೆ. ನೀರು ಜೀವನ, ಈಗ ಅದರ ಅಲಭ್ಯತೆ ಕಾಡಿದೆ ಎಂದು ಅವರು ಬರೆದಿದ್ದಾರೆ. ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಗುರುವಾರ ಆರಂಭವಾಗಲಿದೆ. ಆಗಸ್ಟ್‌ 18 ರಂದು ಮೊದಲ ಪಂದ್ಯ ನಡೆಯಲಿದ್ದರೆ, ಆಗಸ್ಟ್‌ 20 ಹಾಗೂ 22 ರಂದು ನಂತರದ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳಿಗೂ ಹರಾರೆ ಆತಿಥ್ಯ ವಹಿಸಿಕೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!