ಯೂರೋಪ್‌ಗೆ ಅನಿಲ ಪೂರೈಸುವ ಪೈಪ್‌ ಲೈನ್‌ ಸ್ಫೋಟ: ಇದು ರಷ್ಯಾ ಕುತಂತ್ರ ವೆಂದ ಯೂರೋಪಿಯನ್‌ ರಾಷ್ಟ್ರಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉಕ್ರೇನ್‌ ಮೇಲೆ ರಷ್ಯಾ ಸಮರ ಸಾರಿ 7 ತಿಂಗಳಾಗಿವೆ. ಇದೀಗ ಮತ್ತೊಮ್ಮೆ ಯುದ್ಧ ತೀವ್ರತೆ ಪಡೆಯುತ್ತಿದ್ದು, ಒಂದೆಡೆ ಉಕ್ರೇನ್‌ ನಿಂದ ವಶಕ್ಕೆ ಪಡೆದ ಭಾಗಗಳನ್ನು ತನ್ನೊಳಗೆ ವಿಲೀನಗೊಳಿಸುತ್ತಿರುವ ರಷ್ಯಾ ಮತ್ತೊಂದೆಡೆ ಅಪಾರ ಪ್ರಮಾಣದಲ್ಲಿ ಸೇನೆಯನ್ನು ಮರು ಸಂಘಟಿಸುತ್ತಿದೆ. ಇದೆಲ್ಲದರ ನಡುವೆ ರಷ್ಯಾ ತಾನು ಉಕ್ರೇನ್‌ ವಿರುದ್ಧ ಸಮರ ಸಾರಿದಾಗ ತನ್ನ ವಿರುದ್ಧ ನಿಂತ ಯೋರೋಪಿಯನ್‌ ರಾಷ್ಟ್ರಗಳ ಮೇಲೆ ಸೇಡು ತೀರಿಸಿಕೊಳ್ಳಲು ಪರೋಕ್ಷವಾಗಿ ಯುದ್ಧ ಸಾರಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಇಂತಹದ್ದೊಂದು ಆರೋಪವನ್ನು ಯೂರೋಪಿಯನ್‌ ರಾಷ್ಟ್ರಗಳು ಮಾಡುತ್ತಿವೆ. ಈ ಆರೋಪಕ್ಕೆ ಕಾರಣ ಬಾಲ್ಟಿಕ್ ಸಮುದ್ರ ಭಾಗದ ಅಡಿಯಲ್ಲಿ ರಷ್ಯಾದಿಂದ ಜರ್ಮನಿ, ಬ್ರಿಟನ್‌ ಸೇರಿದಂತೆ ಹಾಗೂ ಹಲವು ರಾಷ್ಟ್ರಗಳಿಗೆ ನೈಸರ್ಗಿಕ ಅನಿಲ ಪೂರೈಸುವ  ಪೈಪ್‌ಲೈನ್‌ ನಲ್ಲಿ ಮಂಗಳವಾರ ಸಂಭವಿಸಿದ ದೊಡ್ಡ ಸ್ಫೋಟ.
ರಷ್ಯಾದಿಂದ ಹೊರಟ ನಾರ್ಡ್ ಸ್ಟ್ರೀಮ್ 1 ಮತ್ತು 2 ಪೈಪ್‌ಲೈನ್‌ಗಳಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಸ್ಫೋಟಗಳಿಂದ ಪೈಪ್‌ ಲೈನ್‌ ನಲ್ಲಿ ದೊಡ್ಡ ರಂದ್ರಬಿದ್ದಿದೆ. ಇದರಿಂದ ಅಪಾರ ಪ್ರಮಾಣದ ಅನಿಲ ಸಮುದ್ರದ ಪಾಲಾಗುತ್ತಿದೆ. ಡೆನ್ಮಾರ್ಕ್ ಮತ್ತು ಸ್ವೀಡನ್‌ನ ಸಮುದ್ರ ಭಾಗಗಳ ಮೇಲ್ಮೈನಲ್ಲಿ ಮೀಥೇನ್ ಗುಳ್ಳೆಗಳು ಸುತ್ತುತ್ತಿವೆ. ಇದರಿಂದ ಯೂರೋಪಿಯನ್‌ ರಾಷ್ಟ್ರಗಳು ಕಂಗಾಲಾಗಿವೆ. ಏಕೆಂದರೆ ಯೂರೋಪಿಯನ್‌ ರಾಷ್ಟ್ರಗಳಲ್ಲಿ ಚಳಿಗಾಲದಲ್ಲಿ ಮನೆಗಳನ್ನು ಬಿಸಿಯಾಗಿಡುವ ಉಪಕರಣಗಳಿಗೆ, ಅಲ್ಲಿನ ಯಂತ್ರೋಪಕರಣಗಳಿಗೆ ನೈಸರ್ಗಿಕ ಅನಿಲವನ್ನೇ ಬಹುತೇಕ ಅವಲಂಬಿಸಲಾಗಿದೆ. ಈಗಾಗಲೇ ಇಂಧನ ಬೆಲೆಗಳು ಗಗನಕ್ಕೇರಿದ್ದು, ಒಂದು ವೇಳೆ ಪೈಪ್‌ ಲೈನ್‌ ದುರಸ್ತಿ ತಡವಾದರೆ ಯೂರೋಪ್‌ ನಲ್ಲಿ ಮುಂದಿನ ಚಳಿಗಾಲ ಅತ್ಯಂತ ಭೀಕರವಾಗಿರಲಿದೆ.
ಈ ಪೈಫ್‌ ಲೈನ್‌ ಅನ್ನು ರಷ್ಯಾದ ‘ಗಾಜ್​ಪ್ರೊಮ್’ ಕಂಪನಿ ನಿರ್ವಹಿಸುತ್ತಿದೆ. ಪೈಪ್‌ ಲೈನ್‌ ಛಿದ್ರವಾಗಿ ನೈಸರ್ಗಿಕ ಅನಿಲ ಸೋರಿಕೆಯಾಗಿರುವುದರ ಹಿಂದೆ ರಷ್ಯಾ ಕೈವಾಡವಿದೆ ಎಂಬುದು ಯುರೋಪಿಯನ್‌ ರಾಷ್ಟ್ರಗಳ ಆರೋಪ.

“ಇದು ಆಕಸ್ಮಿಕಲ್ಲ, ನಮ್ಮ ದೇಶಗಳನ್ನು ಚಳಿಗಾಲದಲ್ಲಿ ನರಳಿಸಲು ಮಾಡಿರುವ ಉದ್ದೇಶಪೂರ್ವಕ ಕೃತ್ಯ ಎಂದು ಎಂದು ಡೆನ್ಮಾರ್ಕ್‌ನ ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್ ಆರೋಪಿಸಿದ್ದಾರೆ.
ಸೋರಿಕೆಗೆ ರಷ್ಯಾವನ್ನು ದೂಷಿಸಿದ ಪೋಲೆಂಡ್‌ನ ಪ್ರಧಾನ ಮಂತ್ರಿ ಮಾಟೆಸ್ಜ್ ಮೊರಾವಿಕಿ, ʼರಷ್ಯಾ ಯುರೋಪಿನ ಇಂಧನ ಭದ್ರತೆಯನ್ನು ಮತ್ತಷ್ಟು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆʼ ಎಂದು ಆರೋಪಿಸಿದ್ದಾರೆ. “ನಮಗೆ ಅಲ್ಲಿ ಏನಾಯಿತು ಎಂಬುದರ ವಿವರಗಳು ತಿಳಿದಿಲ್ಲ, ಆದರೆ ಇದೊಂದು ವಿಧ್ವಂಸಕ ಕೃತ್ಯ ಎಂಬುದನ್ನು ಸ್ಪಷ್ಟವಾಗಿ ಗಮನಿಸಬಹುದು” ಮೊರಾವಿಕಿ ಹೇಳಿದರು.
ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಹಿರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಅವರು ಟ್ವಿಟರ್‌ನಲ್ಲಿ ” ಇಂಧನ ಸೋರಿಕೆಯು ರಷ್ಯಾ ಯೋಜಿಸಿರುವ ಭಯೋತ್ಪಾದಕ ದಾಳಿ ಮತ್ತು ಯುರೋಪಿನ ಕಡೆಗೆ ಆಕ್ರಮಣಕಾರಿ ಕೃತ್ಯ” ಎಂದು ಹೇಳಿದ್ದಾರೆ.
ಪೈಪ್‌ಲೈನ್‌ಗಳು ರಷ್ಯಾ ಮತ್ತು ಯುರೋಪ್ ನಡುವಿನ ವಿಶಾಲ ಮುಖಾಮುಖಿಯ ಕೇಂದ್ರಬಿಂದುವಾಗಿದೆ. ಫೆಬ್ರವರಿಯಲ್ಲಿ ಉಕ್ರೇನ್‌ಗೆ ದಂಡ ವಿಧಿಸಲು ಯುರೋಪಿಯನ್ ಒಕ್ಕೂಟವು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ ನಂತರ, ರಷ್ಯಾ ದಶಕಗಳಿಂದ ಯುರೋಪ್‌ಗೆ ಕಳುಹಿಸಿದ ನೈಸರ್ಗಿಕ ಅನಿಲವನ್ನು ತಡೆಹಿಡಿಯಲು ಪ್ರಾರಂಭಿಸಿತು, ಚಳಿಗಾಲದಲ್ಲಿ ಖಂಡಕ್ಕೆ ಶಕ್ತಿಯ ಪೂರೈಕೆಗೆ ಬೆದರಿಕೆ ಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!