ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 10 ನವಜಾತ ಶಿಶುಗಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಇಂದು ಬೆಳಗ್ಗೆ ಝಾನ್ಸಿ ತಲುಪಿದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಕೇವಲ 18 ಹಾಸಿಗೆಗಳ ಸಾಮರ್ಥ್ಯವಿರುವ ವಾರ್ಡ್‌ನಲ್ಲಿ ಒಟ್ಟು 49 ಮಕ್ಕಳಿದ್ದಾರೆ ಎಂದು ಹೇಳಿದರು.
ಏಳು ಮಕ್ಕಳ ಶವಗಳನ್ನು ಗುರುತಿಸಲಾಗಿದ್ದು, ಮೂವರ ಗುರುತು ಪತ್ತೆಯಾಗಿಲ್ಲ. ಅವರ ಕುಟುಂಬ ಸದಸ್ಯರನ್ನು ತಲುಪಲು ಪ್ರಯತ್ನಗಳು ನಡೆಯುತ್ತಿವೆ ಎಂದು ಬ್ರಿಜೇಶ್ ಪಾಠಕ್ ಹೇಳಿದ್ದಾರೆ.
ಬೆಂಕಿಯಲ್ಲಿ ಗಾಯಗೊಂಡ ಇತರ 17 ಮಕ್ಕಳು ಪ್ರಸ್ತುತ ವೈದ್ಯಕೀಯ ಕಾಲೇಜು ಮತ್ತು ವಿವಿಧ ಖಾಸಗಿ ಆಸ್ಪತ್ರೆಗಳ ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ ಏಳು ಮಂದಿ ಖಾಸಗಿ ಸೌಲಭ್ಯಗಳಿಗೆ ದಾಖಲಾಗಿದ್ದಾರೆ ಎಂದು ಪಾಠಕ್ ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಸಿಂಗ್ ಅವರು ಘಟನೆಯ ಸಮಯದಲ್ಲಿ 47 ಶಿಶುಗಳನ್ನು ವಾರ್ಡ್‌ಗೆ ದಾಖಲಿಸಲಾಗಿತ್ತು, 10 ನವಜಾತ ಶಿಶುಗಳು ಸಾವನ್ನಪ್ಪಿವೆ ಮತ್ತು 37 ಮಕ್ಕಳನ್ನು ರಕ್ಷಿಸಲಾಗಿದೆ ಎಂದರು.
ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಝಾನ್ಸಿ ವಿಭಾಗೀಯ ಆಯುಕ್ತ ಮತ್ತು ಪೊಲೀಸ್ ಉಪ ಮಹಾನಿರೀಕ್ಷಕರಿಗೆ ಆದೇಶ ನೀಡಿದ್ದಾರೆ. 12 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.